ಮದ್ವೆಯಾಗಲು ತೋರಿದ ಉತ್ಸಾಹ ಜೀವನದಲ್ಲಿ ತೋರದ ನವದಂಪತಿಯ ಬದುಕು ದುರಂತ ಅಂತ್ಯ!

HYD Couple
Published on

ಶ್ರೀಕಾಕುಳಂ: ಅವರಿಬ್ಬರು ಶಿಕ್ಷಿತರು. ಸರಿ-ತಪ್ಪು ಯಾವುದೆಂದು ಚಿಂತಿಸುವ ಸಾಮರ್ಥ್ಯ ಇದ್ದವರು. ಜೀವನ ಅಂದಮೇಲೆ ಸವಾಲುಗಳು ಬರುವುದು ಸಹಜ ಎಂದು ತಿಳಿದಿದವರು. ಧೈರ್ಯ ಮಾಡಿ ಮದುವೆ ಆದ ಅವರಿಬ್ಬರು ಜೀವನವನ್ನು ಎದುರಿಸಲಾಗದೇ ಆತ್ಮಹತ್ಯೆ ಹಿಡಿದಿರುವುದು ನಿಜಕ್ಕೂ ಆಘಾತಕಾರಿ ವಿಚಾರ.

ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಬುಧವಾರ ನಡೆದಿದೆ. ಮೃತ ದಂಪತಿಯನ್ನು ಹರೀಶ್​ (29) ಮತ್ತು ರೇಣುಕಾ ದಿವ್ಯಾ (20) ಎಂದು ಗುರುತಿಸಲಾಗಿದೆ. ಇಬ್ಬರ ಆತ್ಮಹತ್ಯೆ ಹಿಂದಿರುವ ಕಾರಣ ನಿಗೂಢವಾಗಿದ್ದು, ತನಿಖಾ ನಂತರ ತಿಳಿದುಬರಬೇಕಿದೆ.

ಸಬ್​ ಇನ್ಸ್​ಪೆಕ್ಟರ್​ ಶೇಖ್​ ಮೊಹಮ್ಮದ್​ ಅಲಿ ಪ್ರಕಾರ ಹರೀಶ್​, ಶ್ರೀಕಾಕುಳಂ ಜಿಲ್ಲೆಯ ತನಿವಾಡ ಗ್ರಾಮದ ನಿವಾಸಿ. ಈತ ಎಂಸಿಎ ಓದಿದ್ದ. ರೇಣುಕಾ, ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಆಗಿದ್ದಳು. ಇಬ್ಬರು ಒಂದೇ ಗ್ರಾಮದವರು ಹಾಗೂ ಒಂದೇ ಸಮುದಾಯದವರಾಗಿದ್ದರಿಂದ ಪರಿಚಯವಾಗಿ, ಪ್ರೀತಿಗೆ ತಿರುಗಿತ್ತು. ಕಳೆದ ಸೆಪ್ಟೆಂಬರ್​ 1ರಲ್ಲಿ ಇಬ್ಬರ ಮದುವೆ ಸರಳವಾಗಿ ದೇವಸ್ಥಾನದಲ್ಲೇ ನಡೆದಿತ್ತು.

ಇಬ್ಬರು ಕೆಲಸ ಹುಡುಕಾಟಕ್ಕೆಂದು ಎರಡು ದಿನಗಳ ಹಿಂದೆ ವಿಶಾಖಪಟ್ಟಣಕ್ಕೆ ಬಂದಿದ್ದರು. ಪರಿಚಯಸ್ಥರ ಮನೆಯಲ್ಲೇ ಉಳಿದುಕೊಂಡಿದ್ದರು. ಬುಧವಾರ ಏನಾಯಿತೋ ಇಬ್ಬರ ಶವ ಮನೆಯ ಫ್ಯಾನ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಸಾವಿಗೆ ಕಾರಣ ಏನೆಂದು ತಿಳಿಯಲು ತನಿಖೆ ಚುರುಕುಗೊಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net