ಬಟ್ಟೆ ಬದಲಾಯಿಸಲು ಈಜುಕೊಳದ ಡ್ರಸ್ಸಿಂಗ್​ ರೂಮ್​ ಒಳಗೆ ಹೋದ ಯುವತಿಗೆ ಕಾದಿತ್ತು ಬಿಗ್​ ಶಾಕ್​!

Secret Camera
Published on

ಹೈದರಾಬಾದ್​: ಖಾಸಗಿ ಈಜುಕೊಳದ ಶೌಚಗೃಹ ಹಾಗೂ ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಕದ್ದು ಸೆರೆ ಹಿಡಿಯುತ್ತಿದ್ದ ಆತಂಕಕಾರಿ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಯುವಕನೊಬ್ಬ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನು ಪತ್ತೆ ಹಚ್ಚಿದ ಯುವತಿಯೊಬ್ಬಳು ಪಾಲಕರ ಸಹಾಯದಿಂದ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಪೊಲೀಸರ ಪ್ರಕಾರ ಗುಗುಲೊತು ಮಹೇಶ್​ ಎಂಬಾತ ಸೂರ್ಯಪೇಟೆ ಜಿಲ್ಲೆಯ ಚಿವ್ವೆನ್ಲಾ ವಲಯದ ಕುಡಕುಡ ಗ್ರಾಮದಲ್ಲಿರುವ ಈಜುಕೊಳದಲ್ಲಿ ಕೆಲಸ ಮಾಡುತ್ತಿದ್ದ. ಮೇ 3ರಂದು ತನ್ನ ಮೊಬೈಲ್​ ಕ್ಯಾಮೆರಾವನ್ನು ಆನ್​ ಮಾಡಿ ಅದನ್ನು ಬಾತ್​ರೂಮ್​ನಲ್ಲಿಟ್ಟಿದ್ದ. ಅದೇ ದಿನ ಯುವತಿಯೊಬ್ಬಳು ಬಾತ್​ರೂಮ್​ನಲ್ಲಿ ತನ್ನ ಬಟ್ಟೆಯನ್ನು ಬದಲಾಯಿಸುವಾಗ ಅನುಮಾನಗೊಂಡು ಪರಿಶೀಲಿಸಿದಾಗ ಕ್ಯಾಮೆರಾ ಪತ್ತೆಯಾಗಿದೆ.

ಇದಾದ ಬೆನ್ನಲ್ಲೇ ಯುವತಿ ನಡೆದ ಘಟನೆಯನ್ನು ಪಾಲಕರಿಗೆ ತಿಳಿಸಿದ್ದಾಳೆ. ಬಳಿಕ ಪಾಲಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net