ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್​ ಸೇನಾ ಪಡೆ ಸೇರಿದ ತಮಿಳು ವಿದ್ಯಾರ್ಥಿ! ಪಾಲಕರು ಕೊಟ್ಟ ಕಾರಣ ಹೀಗಿದೆ...

Chennai Student
Published on

ಕೀಯೆವ್​​/ಮಾಸ್ಕೋ/ಚೆನ್ನೈ: ಯೂಕ್ರೇನ್​ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ವಿರುದ್ಧ ಹೋರಾಡಲು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ವಿದ್ಯಾರ್ಥಿಯೊಬ್ಬ ಯೂಕ್ರೇನ್​ಗೆ ಪ್ಯಾರಾ ಮಿಲಿಟರಿ ಪಡೆಗೆ ಸೇರಿದ್ದಾರೆ.

ವಿದ್ಯಾರ್ಥಿಯನ್ನು ಸೈನಿಕೇಶ್​ ರವಿಚಂದ್ರನ್​ ಎಂದು ಗುರುತಿಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ತಮಿಳುನಾಡಿನ ಅಧಿಕಾರಿಗಳು ಸೈನಿಕೇಶ್​ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸೈನಿಕೇಶ್​ಗೆ ಭಾರತೀಯ ಸೇನೆಗೆ ಸೇರಲು ಆಸೆ ಇತ್ತು. ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕರಿಸಲಾಯಿತು ಎಂದು ತಿಳಿದುಬಂದಿದೆ.

2018ರಲ್ಲಿ ಸೈನಿಕೇಶ್​ ಯೂಕ್ರೇನ್​ಗೆ ತೆರಳಿದ್ದಾರೆ. ಖಾರ್ಕೀವ್​ನಲ್ಲಿರುವ ರಾಷ್ಟ್ರೀಯ ಅಂತರಿಕ್ಷಯಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 2022ರ ಜುಲೈನಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು. ಅಷ್ಟರಲ್ಲಿ ರಷ್ಯಾ ಯೂಕ್ರೇನ್​ ಮೇಲೆ ಯುದ್ಧ ಸಾರಿ, ದಾಳಿ ನಡೆಸುತ್ತಿದೆ. ಯೂಕ್ರೇನ್​-ರಷ್ಯಾ ನಡುವಿನ ಯುದ್ಧ ಇಂದು 13 ದಿನಗಳಿಗೆ ಕಾಲಿಟ್ಟಿದೆ.

ಯುದ್ಧದ ನಡುವೆಯೇ ಸೈನಿಕೇಶ್​ ಮತ್ತು ಪಾಲಕರ ಮಧ್ಯೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ಸೈನಿಕೇಶ್​ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ತಾನು ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್​ ಅರೆ ಸೇನಾ ಪಡೆಯನ್ನು ಸೇರಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net