

ನವದೆಹಲಿ: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಶಕ್ಕೆ ಪಡೆದ ಬೆನ್ನಲ್ಲೇ ತಾಲಿಬಾನ್, ಭಾರತ ಜತೆಗಿನ ಎಲ್ಲ ಆಮದು ಮತ್ತು ರಫ್ತು ವ್ಯವಹಾರಗಳನ್ನು ಭಾನುವಾರ ನಿಲ್ಲಿಸಿದೆ ಎಂದು ಅಗ್ರ ರಫ್ತುದಾರರ ಸಂಸ್ಥೆಯು ತಿಳಿಸಿದೆ.
ಭಾರತೀಯ ರಫ್ತು ಸಂಸ್ಥೆಯ (ಎಫ್ಐಇಒ) ಮಹಾನಿರ್ದೇಶಕ (ಡಿಜಿ) ಡಾ. ಅಜಯ್ ಸಹಾಯ್ ಅವರು ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ. ಪಾಕಿಸ್ತಾನ ಸಾರಿಗೆ ಮಾರ್ಗದ ಮೂಲಕ ನಡೆಯುವ ಎಲ್ಲ ಆಮದು-ರಫ್ತು ವ್ಯವಹಾರವನ್ನು ಸದ್ಯ ತಾಲಿಬಾನ್ ತಡೆಹಿಡಿದಿದೆ. ಹೀಗಾಗಿ ದೇಶವು ಆಮದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.
ಭಾರತ ಅನೇಕ ವರ್ಷಗಳಿಂದ ಅಫ್ಘಾನಿಸ್ತಾನ ಜತೆ ಒಳ್ಳೆಯ ಒಡೆನಾಟ ಇಟ್ಟುಕೊಂಡಿತ್ತು. ಅದರಲ್ಲೂ ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಎರಡು ರಾಷ್ಟ್ರಗಳ ಸ್ನೇಹ ಸಂಬಂಧ ಚೆನ್ನಾಗಿತ್ತು. ಭಾರತವು ಆಫ್ಘಾನ್ನ ಬಹುದೊಡ್ಡ ಪಾಲದಾರ ರಾಷ್ಟ್ರ. ಅಫ್ಘಾನಿಸ್ತಾನಕ್ಕೆ 2021ರಲ್ಲಿ ಇದುವರೆಗೂ ಸುಮಾರು 835 ಡಾಲರ್ ಮಿಲಿಯನ್ ಮೌಲ್ಯದ ರಫ್ತು ಮಾಡಲಾಗಿದೆ. ಸುಮಾರು 510 ಮಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಫ್ಘಾನ್ನಿಂದ ಆಮದು ಮಾಡಿಕೊಳ್ಳಾಗಿದೆ. ಇದಲ್ಲದೆ, ಅನೇಕ ಯೋಜನೆಗಳಿಗೆ ಭಾರತ ಆಫ್ಘಾನ್ನಲ್ಲಿ ಹಣ ಹೂಡಿಕೆ ಮಾಡಿದೆ ಎಂದು ಅಜಯ್ ಸಹಾಯ್ ಹೇಳಿದರು.
ಕೆಲವೊಂದು ವಸ್ತುಗಳು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಮಾರ್ಗದ ಮೂಲಕ ಅಚ್ಚುಕಟ್ಟಾಗಿ ಆಮದು-ರಫ್ತಾಗುತ್ತಿವೆ. ಕೆಲವೊಂದು ವಸ್ತುಗಳು ದುಬೈ ಮಾರ್ಗವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಅಂದಹಾಗೆ ಭಾರತವು ಆಫ್ಘಾನ್ ಜತೆಗಿನ ವ್ಯವಹಾರದಲ್ಲಿ ಆರೋಗ್ಯಕರ ಸಂಬಂಧವನ್ನು ಹೊಂದಿತ್ತು. ಸಕ್ಕರೆ, ಔಷಧಿಗಳು, ಹರಳುಗಳು, ಟೀ, ಕಾಫಿ, ಮಸಾಲೆ ಪದಾರ್ಥಗಳು ಮತ್ತು ಟ್ರ್ಯಾನ್ಸ್ಮಿಷನ್ ಟವರ್ಗಳನ್ನು ಭಾರತ ರಫ್ತು ಮಾಡುತ್ತಿತ್ತು. ಆಫ್ಘಾನ್ನಿಂದ ಹೆಚ್ಚಾಗಿ ಡ್ರೈ ಫ್ರೂಟ್ಸ್ ಆಮದು ಮಾಡಿಕೊಳ್ಳುತ್ತಿತ್ತು. ಅಲ್ಲದೆ, ಸ್ವಲ್ಪ ಗಮ್ ಮತ್ತು ಈರುಳ್ಳಿಯನ್ನು ಸಹ ಆಮದು ಮಾಡಿಕೊಳ್ಳುತ್ತಿತ್ತು ಎಂದು ಅಜಯ್ ಸಹಾಯ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಪರಿಸ್ಥಿತಿಯ ಹೊರತಾಗಿಯೂ, ಅಧಿಕಾರಿಯು ಅಫ್ಘಾನಿಸ್ತಾನದೊಂದಿಗಿನ ವ್ಯಾಪಾರ ಸಂಬಂಧಗಳ ಬಗ್ಗೆ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ತಾಲಿಬಾನ್ ಆಡಳಿತದಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)