

ಕಾಬೂಲ್: ಆಫ್ಘಾನಿಸ್ತಾನದ ಬಹುತೇಕ ಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್, ಇದೀಗ ಆಫ್ಘಾನ್ಗೆ ಭಾರತ ಉಡುಗೊರೆಯಾಗಿ ನೀಡಿರುವ ಹೆಲಿಕಾಪ್ಟರ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಎಂಐ24 ಯುದ್ಧ ಹೆಲಿಕಾಪ್ಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ. ಈ ಹೆಲಿಕಾಪ್ಟರ್ ಅನ್ನು ಭಾರತ, ಅಫ್ಘಾನಿಸ್ತಾನದ ವಾಯುಪಡೆಗೆ ಉಡುಗೊರೆಯಾಗಿ ನೀಡಿತ್ತು. ಆಘ್ಘಾನಿಸ್ತಾನದ ಕುಂದ್ಜ್ನಲ್ಲಿ ಹಲಿಕಾಪ್ಟರ್ ಪಕ್ಕದಲ್ಲಿ ತಾಲಿಬಾನ್ ಹೋರಾಟಗಾರರು ನಿಂತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದಾಗ್ಯೂ, ಹೆಲಿಕಾಪ್ಟರ್ನಲ್ಲಿ ರೋಟರ್ ಬ್ಲೇಡ್ಗಳು ಕಾಣೆಯಾಗಿವೆ. ತಾಲಿಬಾನಿಗಳು ಹೆಲಿಕಾಪ್ಟರ್ ಉಪಯೋಗಿಸದಂತೆ ತಡೆಯಲು ಆಫ್ಘಾನ್ ಪಡೆಗಳು ಮೊದಲೇ ಬ್ಲೇಡ್ಗಳನ್ನು ತೆಗೆದಿದ್ದಾರೆಂದು ಹೇಳಲಾಗಿದೆ.
ಹೆಲಿಕಾಪ್ಟರ್ ಉಡುಗೊರೆಯ ವಿವರಕ್ಕೆ ಬರುವುದಾದರೆ, 2019ರಲ್ಲಿ ಮೂರು ಚೀತಾ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ನೊಂದಿಗೆ ಎಂಐ-24 ಅಟ್ಯಾಕ್ ಹೆಲಿಕಾಪ್ಟರ್ ಅನ್ನು ಅಫ್ಘಾನ್ ವಾಯುಪಡೆಗೆ ಉಡುಗೊರೆಯಾಗಿ ನೀಡಿದರು. 2015ರಲ್ಲಿ ಉಡುಗೊರೆಯಾಗಿ ನೀಡಲಾದ ನಾಲ್ಕು ಅಟ್ಯಾಕ್ ಹೆಲಿಕಾಪ್ಟರ್ಗಳಿಗೆ ಬದಲಿಯಾಗಿ ಮಿ -24 ಹೆಲಿಕಾಪ್ಟರ್ಗಳನ್ನು ಆಫ್ಘನ್ನರಿಗೆ ನೀಡಲಾಯಿತು.
ತಾಲಿಬಾನ್ಗಳ ಪ್ರಭಾವವನ್ನು ಹತ್ತಿಕ್ಕಲು ಆಫ್ಘಾನ್ನರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಹೆಲಿಕಾಪ್ಟರ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಕೊಂಚ ಹಿನ್ನೆಡೆಯಾಗಿದೆ. ಈಗಾಗಲೇ ತಾಲಿಬಾನ್ ಆಫ್ಘಾನ್ನ ಬಹುತೇಕ ಭಾಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆಯಷ್ಟೇ ಆಫ್ಘಾನ್ ಕ್ರಿಕೆಟರ್ ರಶೀದ್ ಖಾನ್ ಟ್ವೀಟ್ ಮೂಲಕ ದೇಶವನ್ನು ರಕ್ಷಿಸಿ ಎಂದು ವಿಶ್ವನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)