

ವಾರಾಣಸಿ: ಏರುತ್ತಿರುವ ನಿಂಬೆ ಹಣ್ಣಿನ ಬೆಲೆ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ವಿಶೇಷ ತಂತ್ರ ಪೂಜೆ ನೆರವೇರಿಸಿದ ಅಪರೂಪದ ಪ್ರಸಂಗ ಜರುಗಿದೆ.
ಬ್ಲ್ಯಾಕ್ ಮ್ಯಾಜಿಕ್ ಕೇಂದ್ರ ಎಂದೇ ಖ್ಯಾತಿಯಾಗಿರುವ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಿ, ದೇವರನ್ನು ಸಂತೃಪ್ತಿಗೊಳಿಸಲು 11 ನಿಂಬೆಹಣ್ಣನ್ನು ಬಲಿ ಕೊಡಲಾಯಿತು. ಹರೀಶ್ ಮಿಶ್ರಾ ಎಂಬುವರು ಈ ಪೂಜೆಯನ್ನು ಆಯೋಜಿಸಿದ್ದರು. ಕೆಲವೇ ದಿನಗಳಲ್ಲಿ ನಿಂಬೆ ಹಣ್ಣಿನ ಬೆಲೆ ಕಡಿಮೆ ಆಗುವ ಮೂಲಕ ಈ ಪೂಜೆಯು ಫಲಿಸಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಯಾರಿಗೂ ಹಾನಿ ಮಾಡದಿದ್ದರೆ ಅಂತಹ ಬ್ಲ್ಯಾಕ್ ಮ್ಯಾಜಿಕ್ ತಪ್ಪಲ್ಲ ಎಂದು ಹರೀಶ್ ಮಿಶ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪೂಜೆಯನ್ನು ನಿಂಬೆ ಹಣ್ಣಿನ ಗ್ರಾಹಕರ ಒಳ್ಳೆಯದಕ್ಕಾಗಿ ಮಾಡಿದ್ದೇವೆ ಎಂದು ತಿಳಿಸಿದರು. (ಏಜೆನ್ಸೀಸ್)