

ಶಹಜಹಾನಪುರ: ರೈಲು ಬರುವ ಸಮಯದಲ್ಲಿ ಕ್ರಾಸಿಂಗ್ ಗೇಟ್ ಮುಚ್ಚದ ಪರಿಣಾಮ ಕೆಲ ವಾಹನಗಳಿಗೆ ರೈಲು ಡಿಕ್ಕಿಯಾಗಿ ಐದು ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ಸಂಜೀವ್ ಬಜ್ಪಾಯ್, ಲಖನೌ-ಚಂಡೀಗಢದ ಸೂಪರ್ಫಾಸ್ಟ್ ವಾಹನಗಳಿಗೆ ಡಿಕ್ಕಿಯಾಗಿ ಹಳಿತಪ್ಪಿತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದಲ್ಲದೆ, ಎರಡು ದಿಕ್ಕಿನ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಎಂದು ತಿಳಿಸಿದ್ದಾರೆ.
ಮೀರನಾಪುರ್ ಕರ್ತಾ ರೈಲು ನಿಲ್ದಾಣವನ್ನು ಇಂದು ಬೆಳಗ್ಗೆ ದಾಟಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಕ್ರಾಸಿಂಗ್ನಲ್ಲಿ ಯಾವುದೇ ಗೇಟ್ ಬಾಗಿಲು ಮುಚ್ಚದೇ ಇದ್ದಿದ್ದರಿಂದ ಅಡ್ಡಲಾಗಿ ಬಂದ ವಾಹನಗಳಿಗೆ ರೈಲು ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಮೃತಪಟ್ಟ ಐವರು ಮೂವರು ಒಂದೇ ಕುಟುಂಬಕ್ಕೆ ಸೇರಿದವರು. ಗೇಟ್ ಯಾಕೆ ಮುಚ್ಚಲಿಲ್ಲ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಪ್ರತಿಕ್ರಿನೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್ ಮೃತಪಟ್ಟವರಿಗೆ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. (ಏಜೆನ್ಸೀಸ್)