

ಕೀಯೆವ್/ಮಾಸ್ಕೋ: ಯೂಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸುವ ಮತ್ತು ರಷ್ಯಾ ತನ್ನ ಸೇನಾ ಪಡೆಗಳನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯದ ವಿರುದ್ಧ ರಷ್ಯಾ ವಿಟೋ ತನ್ನ ಅಧಿಕಾರವನ್ನು ಚಲಾಯಿಸಿದೆ.
ಭದ್ರತಾ ಮಂಡಳಿಯ ಕರಡು ನಿರ್ಣಯಕ್ಕೆ ಬೆಂಬಲ ನೀಡದೇ ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ ದೂರ ಉಳಿದಿದೆ. ನಿರ್ಣಯ ಪರ ಮತ ಚಲಾಯಿಸದೆ ಈ ಮೂರು ದೇಶಗಳು ಸಭೆಯಲ್ಲಿ ಗೈರಾಗಿದ್ದವು. ನಿರ್ಣಯದ ಪರವಾಗಿ 11 ದೇಶಗಳು ಮತ ಚಲಾಯಿಸಿವೆ.
ಕರಡು ನಿರ್ಣಯಕ್ಕೆ ಬೆಂಬಲ ನೀಡದ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ರಷ್ಯಾ ವಿಶ್ವಸಂಸ್ಥೆಯ ರಾಯಭಾರಿ ವಾಸ್ಸಿಲಿ ನೆಬೆಂಜಿಯಾ ಧನ್ಯವಾದ ಹೇಳಿದ್ದು, ಈ ಕರಡು ನಿರ್ಣಯ ರಷ್ಯಾ ವಿರೋಧಿ ಎಂದು ಕರೆದಿದ್ದಾರೆ. ನಿಮ್ಮ ಕರಡು ನಿರ್ಣಯವು ಯೂಕ್ರೇನ್ ಚದುರಂಗ ಫಲಕದಲ್ಲಿ ಮತ್ತೊಂದು ಕ್ರೂರ ಮತ್ತು ಅಮಾನವೀಯ ನಡೆಯಲ್ಲದೇ ಬೇರೆನೂ ಇಲ್ಲ ಎಂದು ನೆಬೆಂಜಿಯಾ ಟೀಕಿಸಿದ್ದಾರೆ.
ಮತ ಚಲಾಯಿಸಿದ ಬಳಿಕ ಮಾತನಾಡಿದ ಭದ್ರತಾ ಮಂಡಳಿಯ ಯುಎಸ್ ರಾಯಭಾರಿ ಲಿಂಡಾ ಥಾಮಸ್ ಗ್ರೀನ್ಫೀಲ್ಡ್, ನೆರೆಯ ದೇಶದ ಮೇಲೆ ದಾಳಿ ಮಾಡುವ ಮೂಲಕ ರಷ್ಯಾ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಮತ್ತು ವಿಶ್ವಸಂಸ್ಥೆಯ ನಿಯಮಗಳನ್ನು ಬುಡಮೇಲು ಮಾಡಿದೆ ಎಂದು ಹೇಳಿದರು. ರಷ್ಯಾ ನಿಮಗೆ ಈ ನಿರ್ಣಯದ ವಿರುದ್ಧ ವಿಟೋ ಅಧಿಕಾರ ಇರಬಹುದು ಆದರೆ, ನಮ್ಮ ಧ್ವನಿಯ ವಿರುದ್ಧ, ಸತ್ಯದ ವಿರುದ್ಧ, ನಮ್ಮ ತತ್ವಗಳ ವಿರುದ್ಧ ಮತ್ತು ಯೂಕ್ರೇನಿಯನ್ ಜನರ ವಿರುದ್ಧ ನೀವು ವಿಟೋ ಅಧಿಕಾರ ಬಳಸಲಾಗದು ಎಂದರು.
ವಿಶ್ವಸಂಸ್ಥೆಯ ನಿರ್ಣಯದ ಪರ ಮತ ಚಲಾಯಿಸದಿದ್ದಕ್ಕೆ ಸ್ಪಷ್ಟನೆ ನೀಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಸದಸ್ಯ ಟಿ.ಎಸ್. ತಿರುಮೂರ್ತಿ, ರಾಜತಾಂತ್ರಿಕತೆಯ ಹಾದಿಯನ್ನು ಕೈಬಿಟ್ಟಿರುವುದು ನಿಜಕ್ಕೂ ವಿಷಾದದ ಸಂಗತಿ. ನಾವು ಅದಕ್ಕೆ ಮರಳಬೇಕಿದೆ. ಈ ಎಲ್ಲಾ ಕಾರಣಗಳಿಂದಾಗಿ ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ ಎಂದು ಹೇಳಿದರು. (ಏಜೆನ್ಸೀಸ್)