

ಮಾಸ್ಕೋ: ಯೂಕ್ರೇನ್ ಮೇಲೆ ರಷ್ಯಾ ಘೋಷಿಸಿದ ಯುದ್ಧ ತೀವ್ರಗತಿಗೆ ತಿರುಗಿದ್ದು, ಈಗಾಗಲೇ ರಷ್ಯಾ ದಾಳಿಯಲ್ಲಿ ನೂರಾರು ಮಂದಿ ಅಸುನೀಗಿದ್ದಾರೆ. ಯೂಕ್ರೇನ್ ಪೂರ್ತಿ ಸ್ಫೋಟಗಳು ಸಂಭವಿಸುತ್ತಿದ್ದು, ಪೂರ್ಣ ಪ್ರಮಾಣದ ಆಕ್ರಮಣವನ್ನು ರಷ್ಯಾ ನಡೆಸುತ್ತಿದೆ.
ಯೂಕ್ರೇನಿಯನ್ ಮಿಲಿಟರಿ ವಾಯುನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಗೊಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. ಇನ್ನೊಂದೆಡೆ ರಷ್ಯಾದ ಐದು ಯುದ್ಧ ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿರುವುದಾಗಿ ಉಕ್ರೇನಿಯನ್ ಮಿಲಿಟರಿ ಹೇಳಿಕೊಂಡಿದೆ. ಸದ್ಯ ಉಭಯ ದೇಶಗಳ ನಡುವೆ ಯುದ್ಧದ ಕಿಚ್ಚು ಹೆಚ್ಚಾಗಿದ್ದು, ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಬೀರಿದೆ.
ಯೂಕ್ರೇನ್ ಪರ ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳು ನಿಂತಿದ್ದು, ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಎಚ್ಚರಿಕೆಯನ್ನು ನೀಡಿವೆ. ಆದರೆ, ಈ ವಿಚಾರದಲ್ಲಿ ಯಾರೊಬ್ಬರು ಹಸ್ತಕ್ಷೇಪ ಮಾಡದಂತೆ ರಷ್ಯಾ ಅಧ್ಯಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಭಾರತ ಮಾತ್ರ ಯಾರಿಗೂ ಬೆಂಬಲ ಘೋಷಿಸದೆ ತಟಸ್ಥ ನೀತಿಯನ್ನು ಅನುಸರಿಸಿದೆ.
ಮೊನ್ನೆಯಷ್ಟೇ (ಫೆ.22) ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅನೇಕ ರಾಷ್ಟ್ರಗಳು ರಷ್ಯಾಗೆ ಛೀಮಾರಿ ಹಾಕಿದ್ದವು. ಶಾಂತಿ ಕಾಪಾಡುವಂತೆ ರಷ್ಯಾಗೆ ಒತ್ತಾಯ ಮಾಡಿದರು ಕೂಡ ರಷ್ಯಾ ತನ್ನ ನಿಲುವು ಬದಲಿಸದೇ ಇದೀಗ ಯುದ್ಧವನ್ನು ಘೋಷಿಸಿದೆ. ರಷ್ಯಾ ನಡೆಯಿಂದ ಬೇಸತ್ತಿರುವ ಬ್ರಿಟನ್, ಜರ್ಮನಿ ಮತ್ತು ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಈಗಾಗಲೇ ಆರ್ಥಿಕ ನಿರ್ಬಂಧಗಳನ್ನು ರಷ್ಯಾ ಮೇಲೆ ಹೇರಿವೆ. ಆದರೂ ರಷ್ಯಾ ಮಾತ್ರ ಯುದ್ಧಕ್ಕೆ ಅಂಟಿಕೊಂಡು ಕುಳಿತಿದೆ. (ಏಜೆನ್ಸೀಸ್)