ರಷ್ಯಾದಿಂದ ಯುದ್ಧ ಘೋಷಣೆ: ಸೇನಾಡಳಿತ ಘೋಷಿಸಿದ ಯೂಕ್ರೇನ್​

Russia
Published on

ಮಾಸ್ಕೋ: ಯುದ್ಧ ಘೋಷಣೆಯ ಬೆನ್ನಲ್ಲೇ ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದ್ದು, ಈಗಾಗಲೇ ರಾಜಧಾನಿ ಕೈವ್​​ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ರಷ್ಯಾ ದಾಳಿ ತೀವ್ರವಾಗುತ್ತಿದ್ದಂತೆ ಯೂಕ್ರೇನ್ ಸೇನಾಡಳಿತವನ್ನು ಘೋಷಣೆ ಮಾಡಿದೆ.

ಇಡೀ ದೇಶವನ್ನು ಸೇನಾಡಳಿತಕ್ಕೆ ಯೂಕ್ರೇನ್​ ಒಪ್ಪಿಸಿರುವುದಾಗಿ ಅಲ್ಲಿನ​ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗಾಗಲೇ ಯೂಕ್ರೇನ್​ ರಾಜಧಾನಿ ಕೈವ್, ಕರ್ಕಿವ್, ಡೊನೆಟ್ಸ್ಕ್ ಪ್ರಾಂತ್ಯದ ಮರಿಯುಪೋಲ್ ಮತ್ತು ರಷ್ಯಾದಲ್ಲಿ ಬೆಲ್ಗೊರೊಡ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಯೂಕ್ರೇನ್​ನಲ್ಲಿ ವಿಮಾನ ಸಂಚಾರ ಸ್ಥಗಿತವಾಗಿದ್ದು, ಯುದ್ಧದ ತೀವ್ರತೆ ಹೆಚ್ಚಾಗಿದೆ. ಇದುವರೆಗೂ 10 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಇತ್ತ ರಷ್ಯಾ ದಾಳಿಯನ್ನು ನಿಲ್ಲಿಸಲು ಕರೆ ನೀಡುವಂತೆ ವಿಶ್ವಸಂಸ್ಥೆಯನ್ನು ಯೂಕ್ರೇನ್​ ಆಗ್ರಹಿಸಿದೆ. ಆದರೆ, ದಾಳಿಯನ್ನು ಮುಂದುವರಿಸಿರುವ ರಷ್ಯಾ ತನ್ನ ದಾಳಿ ಯೂಕ್ರೇನಿಯನರ ಮೇಲಲ್ಲ, ಬದಲಾಗಿ ಮಿಲಿಟರಿ ಸ್ಥಾಪನೆಗಳ ಮೇಲಷ್ಟೇ ಎಂದಿದೆ. ಅಲ್ಲದೆ, ಯೂಕ್ರೇನಿಯನ್ನರ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ಕೂಡ ನಡೆಸಲಾಗುವುದು ಎಂದು ರಷ್ಯಾ ವಿಶ್ವಸಂಸ್ಥೆಯಲ್ಲಿ ತಿಳಿಸಿದೆ.

ಯೂಕ್ರೇನ್​ ವಿರುದ್ಧ ಯುದ್ಧ ಘೋಷಿಸಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಈ ಸೇನಾ ಕಾರ್ಯಾಚರಣೆಯು ಯೂಕ್ರೇನ್​ ಅನ್ನು ಸೈನ್ಯೀಕರಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಯೂಕ್ರೇನ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ ಎಂದು ಹೇಳಿದ್ದಾರೆ.

ರಷ್ಯಾ ಮತ್ತು ಯೂಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು ಸದ್ಯ ಅನಿವಾರ್ಯ ಎಂದಿರುವ ಪುತಿನ್, ಯೂಕ್ರೇನಿಯನ್ ಸೇವಾ ಸದಸ್ಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಕರೆ ನೀಡಿದ್ದಾರೆ. ಈ ವಿಚಾರದಲ್ಲಿ ಹೊರಗಿನಿಂದ ಹಸ್ತಕ್ಷೇಪ ಮಾಡುವವರಿಗೂ ಎಚ್ಚರಿಕೆಯ ಸಂದೇಶವನ್ನು ಪುತಿನ್​ ರವಾನಿಸಿದ್ದಾರೆ. ಯಾರಾದರೂ ಹಸ್ತಕ್ಷೇಪ ಮಾಡಿದರೆ, ಇತಿಹಾಸದಲ್ಲೇ ಎಂದಿಗೂ ಎದುರಿಸದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧಿತ ಎಲ್ಲ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನಾನು ಹೇಳುವುದನ್ನು ನೀವು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಯೂಕ್ರೇನ್ ನ್ಯಾಟೋಗೆ ಸೇರುವುದನ್ನು ತಡೆಯಲು ಮತ್ತು ಮಾಸ್ಕೋ ಭದ್ರತಾ ಖಾತರಿಗಳನ್ನು ನೀಡುವ ರಷ್ಯಾದ ಬೇಡಿಕೆಯನ್ನು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಲಕ್ಷಿಸುತ್ತಿವೆ ಎಂದು ಪುತಿನ್​ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net