

ಕೀಯೆವ್/ಮಾಸ್ಕೋ: ಯೂಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿರುವ ರಷ್ಯಾ, ಯೂಕ್ರೇನ್ನ ಎರಡು ನಗರಗಳಾದ ಮರಿಯಾಪೌಲ್ ಮತ್ತು ವೋಲ್ನೋವೋಕಾದಲ್ಲಿ ಕದನ ವಿರಾಮವನ್ನು ಘೋಷಿಸಿರುವುದಾಗಿ ರಷ್ಯಾ ಮಾಧ್ಯಮ ಸ್ಪುಟ್ನಿಕ್ ಶನಿವಾರ ವರದಿ ಮಾಡಿದೆ.
ಸದ್ಯ ರಷ್ಯಾ ಮರಿಯಾಪೌಲ್ ಮತ್ತು ವೋಲ್ನೋವೋಕಾ ನಗರವನ್ನು ಸುತ್ತುವರಿದಿದ್ದು, ಅಲ್ಲಿನ ನಾಗರಿಕರಿಕರು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರವಾಗಲು ಕಾಲವಾಕಾಶ ನೀಡಿ ಕದನ ವಿರಾಮವನ್ನು ರಷ್ಯಾ ಘೋಷಣೆ ಮಾಡಿದೆ. ಇಂದು ಬೆಳಗ್ಗೆ 11.30ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಯೂಕ್ರೇನ್ನಲ್ಲಿ ತೀವ್ರ ದಾಳಿಯನ್ನು ಮುಂದುವರಿಸಿರುವ ರಷ್ಯಾ ಈಗಾಗಲೇ ಯೂಕ್ರೇನ್ ರಾಜಧಾನಿ ಕೀಯೆವ್ ಮತ್ತು ಪ್ರಮುಖ ನಗರ ಖಾರ್ಕೀವ್ ಅನ್ನು ವಶಕ್ಕೆ ಪಡೆದುಕೊಂಡು ಇಡೀ ಯೂಕ್ರೇನ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ದಾಳಿ ಮುಂದಿವರಿಸಿದೆ.
ನಿನ್ನೆ ಯೂರೋಪ್ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ಶೆಲ್ ದಾಳಿ ನಡೆಸಿರುವುದಾಗಿ ಹತ್ತಿರದ ಪಟ್ಟಣದ ಮೇಯರ್ ಒಬ್ಬರು ತಿಳಿಸಿದ್ದಾರೆ. ರಷ್ಯಾ ಪಡೆಗಳು ಗುಂಡಿನ ದಾಳಿ ಮುಂದುವರಿಸಿರುವುದರಿಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ. ರಷ್ಯಾದ ಈ ನಡೆ ತುಂಬಾ ವಿನಾಶಕಾರಿಯಾಗಿದ್ದು, ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.
ರಷ್ಯಾ ಕಳೆದ ಫೆ. 24ರಂದು ಯೂಕ್ರೇನ್ ವಿರುದ್ಧ ಆಕ್ರಮಣ ಆರಂಭಿಸಿದಾಗಿನಿಂದ ಈವರೆಗೆ ಲಕ್ಷಾಂತರ ಮಂದಿ ಯೂಕ್ರೇನ್ ತೊರೆದಿದ್ದಾರೆ. ಅಲ್ಲದೆ, ಈ ಯುದ್ಧ 700ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. (ಏಜೆನ್ಸೀಸ್)