ಫನ್​ ಬಕೆಟ್​ ಭಾರ್ಗವನ ಗುಟ್ಟು ಬಾಲಕಿ ಹೊಟ್ಟೆಯಿಂದ ರಟ್ಟು: ಟಿಕ್​ಟಾಕ್​ ವಿಡಿಯೋ ಹಿಂದಿನ ಕರಾಳ ಮುಖ ಬಯಲು!

Fun Bucket
Published on

ವಿಜಯವಾಡ: ಫನ್​ ಬಕೆಟ್​ ಭಾರ್ಗವ... ಈ ಹೆಸರು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅದಕ್ಕೆ ಕಾರಣ ಆತನ ವಿರುದ್ಧ ದಾಖಲಾಗಿರುವ ಕ್ರಿಮಿನಲ್​ ಪ್ರಕರಣ. ಟಿಕ್​ಟಾಕ್​ನಿಂದ ಭಾರಿ ಫೇಮಸ್​ ಆದ ಭಾರ್ಗವ, ಫನ್​ ಬಕೆಟ್​ ಭಾರ್ಗವ ಎಂದೇ ಜಾಲತಾಣದಲ್ಲಿ ಪ್ರಸಿದ್ಧಿ. ಆತನ ವಿಡಿಯೋ ನೋಡಿದವರ ಸಂಖ್ಯೆ ಕಡಿಮೆಯೇನಿಲ್ಲ. ಹೀಗಿರುವಾಗ ಆತ 14 ವರ್ಷದ ಬಾಲಕಿಯನ್ನು ವಂಚಿಸಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾಗಿಸಿರುವ ಆರೋಪದಲ್ಲಿ ಮಂಗಳವಾರ ಭಾರ್ಗವನನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದಾರೆ.

ಭಾರ್ಗವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ವಿಶಾಖಪಟ್ಟಣಂ ಪೊಲೀಸರು ಆತನಿಂದ ಬೇರೆ ಹುಡುಗಿಯರು ಮೋಸ ಹೋಗಿರಬಹುದಾ ಎಂಬ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದುವರೆಗೂ ಎಲ್ಲರೂ ಅಂದುಕೊಂಡಂತೆ ಭಾರ್ಗವ ಮೃದು ಸ್ವಭಾವದ ವ್ಯಕ್ತಿಯಲ್ಲ. ಒಂದು ಕಡೆ ತನ್ನ ವಿಡಿಯೋಗಳಲ್ಲಿ ಜನರನ್ನು ನಗಿಸುವ ಮತ್ತು ಸಾಮಾಜಿಕ ಕಳಕಳಿಯನ್ನು ತೋರುತ್ತಾ ಒಳ್ಳೆಯವನೆಂದು ನಟಿಸಿದರೆ, ಮತ್ತೊಂದೆಡೆ ತನ್ನ ಅಸಲಿ ಮುಖವಾಡ ಕಳಚಿ, ಹುಡುಗಿಯರನ್ನು ಭಾವನಾತ್ಮಕವಾಗಿ ಬೆದರಿಸಿ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ತುಂಬಾ ಫೇಮಸ್​ ಮಾಡಿಬಿಡುತ್ತಾನೆಂಬ ಆಸೆಗೆ ಬಿದ್ದ ಬಾಲಕಿಯೊಬ್ಬಳು ಇದೀಗ ಆತನಿಂದ ಗರ್ಭಿಣಿಯಾಗಿ ಆಡುವ ವಯಸ್ಸಲ್ಲಿ ಹೊಟ್ಟೆಯ ಭಾರ ಹೊತ್ತುಕೊಂಡಿದ್ದಾಳೆ. ಇನ್ನು ಅನೇಕರು ಆತನ ಮೋಹದ ಜಾಲಕ್ಕೆ ಬಿದ್ದಿರುವ ಶಂಕೆ ಇದೆ.

ವಿಡಿಯೋ ಹಿಂದಿನ ಅಸಲಿ ಮುಖವಾಡ
ಅಂದಹಾಗೆ ಭಾರ್ಗವ ಓರ್ವ ಸ್ತ್ರೀಲೋಲ ಎಂದು ತಿಳಿದುಬಂದಿದೆ. ಇನ್​​ಸ್ಟಾಗ್ರಾಂನಲ್ಲಿ ಫೇಮಸ್​ ಮಾಡಿಬಿಡುತ್ತೇನೆಂಬ ಮಾಯಾದ ಮಾತಗಳನ್ನು ಆಡಿ ಹುಡುಗಿಯರನ್ನು ಪುಸಲಾಯಿಸುವುದೇ ಆತನ ಚಾಳಿಯಾಗಿತ್ತು. ತನ್ನ ಪ್ರಚಾರದ ಗೀಳಿಗೆ ವಿಡಿಯೋದಲ್ಲಿ ಹುಡುಗಿಯರನ್ನು ಕೀಳಾಗಿ ತೋರಿಸುತ್ತಿದ್ದನಂತೆ. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಸ್ವತಃ ಆತನೇ ಹೇಳಿಕೊಂಡಿದ್ದ. ನಟನೆ ಹೆಸರಲ್ಲಿ ಹುಡುಗಿಯರನ್ನು ಬೇಕಂತಲೇ ಹಿಡಿದುಕೊಳ್ಳುವುದು, ಅವರನ್ನು ಬೇಕಾದ ರೀತಿಯಲ್ಲಿ ಸ್ಪರ್ಶಿಸುವುದು, ಕಿಸ್​ ಮಾಡುವುದು ಮಾಡಿ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುತ್ತಿದ್ದ. ಆತನ ಅನೇಕ ವಿಡಿಯೋಗಳಲ್ಲಿ ಲವರ್​ ಬಾಯ್​ ಆಗಿಯೇ ಕಾಣಿಸಿಕೊಂಡಿದ್ದು, ಈ ಮೂಲಕ ಹುಡುಗಿಯರ ಜತೆ ಹೆಚ್ಚು ಸಲುಗೆ ಬೆಳೆಸಿಕೊಳ್ಳುತ್ತಿದ್ದ. ಇದೆಲ್ಲವರೂ ಆತನ ದುರುದ್ದೇಶದ ಭಾಗವೇ ಆಗಿತ್ತು. ಇದರ ನಡುವೆ ಭಾರ್ಗವನ ಮಾಯದ ಮಾತಿಗೆ ಮರುಳಾಗಿ ಹುಡುಗಿಯರು ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ತನ್ನ ಜತೆ ವಿಡಿಯೋ ಮಾಡಿರುವ ಅನೇಕರನ್ನು ನಂಬಿಸಿರುವ ಭಾರ್ಗವ ಮೋಸವೆಸಗಿದ್ದಾನೆ. ಆದರೆ, ಕೆಲವು ಮುಂದೆ ಬಂದು ಹೇಳಿಕೊಳ್ಳಲು ಮರ್ಯಾದೆ ಭಯದಿಂದ ಹೆದರಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣವೇನು?
ಆದರೆ, ಭಾರ್ಗವನ ಗುಟ್ಟು ಬಾಲಕಿಯ ಹೊಟ್ಟೆಯಿಂದ ರಟ್ಟು ಎನ್ನುವಂತೆ ಟಿಕ್​ಟಾಕ್​ ವಿಡಿಯೋ ಹೆಸರಿನಲ್ಲಿ 14 ವರ್ಷದ ಬಾಲಕಿಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ಫೋಟೋ ಮತ್ತು ವಿಡಿಯೋ ತೋರಿಸಿ, ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆಂಬ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರ್ಗವ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net