ಪ್ರಧಾನಿ ಮೋದಿ ಭಾಗವಹಿಸಿದ್ದ ಸಮಾವೇಶದ ಸಮೀಪದಲ್ಲೇ ಸ್ಫೋಟ: ಸ್ಥಳದಲ್ಲಿ ಆರ್​ಡಿಎಕ್ಸ್ ಕುರುಹು​ ಪತ್ತೆ

PM Modi
Published on

ನವದೆಹಲಿ: ಏಪ್ರಿಲ್​ 24ರ ಪಂಚಾಯತ್​ ರಾಜ್​ ದಿವಸದಂದು ಜಮ್ಮುವಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇದೀಗ ಅದರ ಸಮೀಪವೇ ಸ್ಫೋಟ ಸಂಭವಿಸಿದ್ದು, ಆರ್‌ಡಿಎಕ್ಸ್ ಮತ್ತು ನೈಟ್ರೇಟ್ ಸಂಯೋಜನೆಯ ಕುರುಹುಗಳು ಪತ್ತೆಯಾಗಿವೆ.

ಉಲ್ಕಾಶಿಲೆಯ ಅಪ್ಪಳದಿಂದ ಕುಳಿ ಸಂಭವಿಸಿದೆ ಎಂದು ಆರಂಭದಲ್ಲಿ ಪೊಲೀಸರು ಭಾವಿಸಿದ್ದರು. ಆದರೆ, ಇದೀಗ ಸ್ಫೋಟಕಗಳ ಕುರುಹುಗಳು ಪತ್ತೆಯಾಗಿರುವುದರಿಂದ ಅನುಮಾನ ಮೂಡಿದೆ. ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಸಮಾವೇಶ ನಡೆದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತಿಯಿಂದ 12 ಕಿ.ಮೀ ದೂರದಲ್ಲಿರುವ ಜಮ್ಮುವಿನ ಲಾಲಿಯಾನ ಗ್ರಾಮದ ಅಂಗಳದಲ್ಲಿ ಈ ಸ್ಫೋಟ ಸಂಭವಿಸಿದೆ.

ಈ ಘಟನೆ ಉಗ್ರರಿಗೆ ಸಂಬಂಧಿಸಿರುವಂತೆ ಕಾಣುತ್ತಿಲ್ಲ. ಸದ್ಯ ಪ್ರಕರಣ ದಾಖಲಿಸಿದ್ದು, ಘಟನೆಯ ಖಚಿತತೆಗಾಗಿ ತನಿಖೆ ನಡೆಯುತ್ತಿದೆ. ಇದು ಉಲ್ಕಾಶಿಲೆಯ ಅಪ್ಪಳದಿಂದ ಆಗಿರಬಹುದು ಅಥವಾ ಮಿಂಚಿನಿಂದಲೂ ಸಂಭವಿಸಿರಬಹುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್​ 24ರ ಭಾನುವಾರದಂದು ಪಂಚಾಯತ್​ ರಾಜ್​ ದಿವಸ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ವಿಶೇಷವೆಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್​ 370 ಮತ್ತು 35ಎ ಅನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ. ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್​ನಲ್ಲಿ ಸಮಾವೇಶ ನಡೆಯಿತು. ಈ ವೇಳೆ ಪ್ರಧಾನಿ ಅವರು 20 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net