ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮಂಗಳಸೂತ್ರ ಕದ್ದು ಪುರೋಹಿತ ಪರಾರಿ! ಮುಂದಾಗಿದ್ದು ರೋಚಕ

Mangalasutra
Published on

ಹೈದರಾಬಾದ್​: ದೇವರ ಸ್ಥಾನದಲ್ಲಿ ನಿಂತು ವೇದ-ಮಂತ್ರಗಳನ್ನು ಪಠಿಸುವ ಮೂಲಕ ನವಜೋಡಿಯನ್ನು ಮದುವೆ ಬಂಧನದಲ್ಲಿ ಒಂದು ಮಾಡುವಂತಹ ಸೇತುವೆಯಾಗಿ ಕೆಲಸ ಮಾಡುವ ಪುರೋಹಿತನೇ ಅಡ್ಡದಾರಿ ಹಿಡಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಮದುವೆ ಮಂಟಪದಲ್ಲಿ ವಧು-ವರರ ಎದುರೇ ಪುರೋಹಿತನೊಬ್ಬ ಮಂಗಳಸೂತ್ರವನ್ನು ಎಗರಿಸಿದ ಘಟನೆ ಮೇದಕ್​ ಜಿಲ್ಲೆಯ ತುಪ್ರಾನ್​ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಜ್ಞಾನೇಂದರ್ ದಾಸ್​ಗೂ ತುಪ್ರಾನ್​ ಮುನ್ಸಿಪಾಲಿಟಿಯಲ್ಲಿ ವಾಸವಿದ್ದ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಗಜ್ವೆಲ್ ಮೂಲದ ಪುರೋಹಿತರನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಂತೆಯೇ ಮದುವೆ ಸಂಭ್ರಮ ನಡೆಯುವಾಗ ಮಂತ್ರ ಹೇಳುತ್ತಲೇ ವಧು-ವರ ಮತ್ತು ಸಂಬಂಧಿಕರ ಗಮನವನ್ನು ಬೇರೆಡೆಗೆ ಸೆಳೆದು ಪುರೋಹಿತ ಮಂಗಳಸೂತ್ರವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿಟ್ಟುಕೊಂಡಿದ್ದಾನೆ. ಈ ದೃಶ್ಯವು ಅಲ್ಲಿಯೇ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದಾದ ಬಳಿಕ ವರ ತಾಳಿ ಕಟ್ಟಲು ಮುಂದಾದಾಗ ಮುಂದಿನ ವಿಧಾನಗಳನ್ನು ಅನುಸರಿಸದೇ ತರಾತುರಿಯಲ್ಲಿ ಪುರೋಹಿತ ಮದುವೆ ಮಂಟಪವನ್ನು ಖಾಲಿ ಮಾಡಿದ್ದಾನೆ. ಇತ್ತ ಪುರೋಹಿತರು ಹೋಗುತ್ತಿದ್ದಂತೆ ಅನುಮಾನ ಬಂದು ಪರಿಶೀಲನೆ ಮಾಡಿದಾಗ ಅಲ್ಲಿ ಮಂಗಳಸೂತ್ರ ನಾಪತ್ತೆಯಾಗಿರುವುದನ್ನು ನೋಡಿ ವಧು-ವರ ಶಾಕ್​ ಆಗಿದ್ದಾರೆ.

ತಮ್ಮ ಅನುಮಾನ ನಿಜವಾದಾಗ ತಕ್ಷಣ ವಧು-ವರ ಪುರೋಹಿತರಿಗೆ ಕರೆ ಮಾಡಿದ್ದಾರೆ. ಆದರೆ, ಅವರ ಫೋನ್​ ಸ್ವಿಚ್​ ಆಫ್​ ಆಗಿತ್ತು. ತಕ್ಷಣ ಗಜ್ವೆಲ್​ನಲ್ಲಿರುವ ಅವರ ಮನೆಗೆ ಹೋದಾಗ ಪುರೋಹಿತರ ತಾಯಿ ಉಡಾಫೆ ಉತ್ತರ ನೀಡಿದ್ದಾರೆ. ಇದಾದ ಬಳಿಕ ಮದುವೆ ರೆಕಾರ್ಡಿಂಗ್​ ವಿಡಿಯೋವನ್ನು ವೀಕ್ಷಿಸಿದಾಗ ಪುರೋಹಿತನ ನಿಜಬಣ್ಣ ಬಯಲಾಗಿದೆ. ಬಳಿಕ ಸಂತ್ರಸ್ತರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ತುಣುಕನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಪುರೋಹಿತರೊಬ್ಬರು ಮಂಗಳಸೂತ್ರವನ್ನೇ ಕಳ್ಳತನ ಮಾಡಿದ ಸುದ್ದಿ ಕೇಳಿ ಅನೇಕರು ಶಾಕ್​ಗೆ ಒಳಗಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net