

ನವದೆಹಲಿ: ಕರೊನಾ ಹಾವಳಿಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಎಲ್ 14ನೇ ಆವೃತ್ತಿಯನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಲು ಬಿಸಿಸಿಐ ವಿಶೇಷ ಯೋಜನೆಯನ್ನು ರೂಪಿಸುತ್ತಿದೆ. ಐಪಿಎಲ್ ಟೂರ್ನಿಗೆ ಸಮಯ ಹೊಂದಿಸುವ ಸಲುವಾಗಿ ಬಿಸಿಸಿಐ, ಮುಂಬರುವ ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆಲ ಪಂದ್ಯಗಳನ್ನು ಕಡಿತಗೊಳಿಸುವ ಬಗ್ಗೆಯೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಜತೆಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
‘ಟೆಸ್ಟ್ ಸರಣಿಯಿಂದ ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳನ್ನು ಕಡಿತಗೊಳಿಸುವ ಬಗ್ಗೆ ಇಸಿಬಿ ಮತ್ತು ಬಿಸಿಸಿಐ ನಡುವೆ ಚರ್ಚೆಗಳು ನಡೆಯುತ್ತಿವೆ. ಅದರ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಟೆಸ್ಟ್ ಸರಣಿಯಿಂದ ಪಂದ್ಯ ಕಡಿತಕ್ಕೆ ಇಸಿಬಿ ಒಪ್ಪಿಕೊಳ್ಳುವುದೇ ಆದರೆ, ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲೇ ಆಯೋಜಿಸಬೇಕಾಗುತ್ತದೆ. ಅದರಿಂದ ಕೆಲ ಕೌಂಟಿ ತಂಡಗಳಿಗಾದರೂ ಲಾಭವಾಗುತ್ತದೆ. ಹೀಗಾಗಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲೇ ಆಯೋಜಿಸಲು ಒಪ್ಪಿದರೆ ಟೆಸ್ಟ್ ಕಡಿತಗೊಳ್ಳಬಹುದು’ ಎಂದು ಮೂಲಗಳು ತಿಳಿಸಿವೆ.
ಹಾಲಿ ವೇಳಾಪಟ್ಟಿಯ ಅನ್ವಯ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆಗಸ್ಟ್ 4ರಂದು ಆರಂಭವಾಗಲಿದ್ದು, ಸರಣಿಯ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಸೆಪ್ಟೆಂಬರ್ 10ರಿಂದ 14ರವರೆಗೆ ನಡೆಯಲಿದೆ. 4ನೇ ಟೆಸ್ಟ್ ಸೆಪ್ಟೆಂಬರ್ 2ರಿಂದ 6ರವರೆಗೆ ನಡೆಯಲಿದೆ. ಕೊನೇ 2 ಟೆಸ್ಟ್ ಸರಣಿ ಕಡಿತಗೊಂಡರೆ ಆಗಸ್ಟ್‌ನಲ್ಲೇ ಸರಣಿ ಮುಗಿಯಲಿದ್ದು, ಸೆಪ್ಟೆಂಬರ್‌ನಲ್ಲಿ ಐಪಿಎಲ್ ಆಯೋಜನೆಗೆ ಸೂಕ್ತ ಕಾಲಾವಕಾಶ ಲಭಿಸಲಿದೆ.
ಐಪಿಎಲ್ 14ನೇ ಆವೃತ್ತಿಯಲ್ಲಿ ಸದ್ಯ 29 ಪಂದ್ಯ ನಡೆದಿದ್ದು, ಇನ್ನೂ 31 ಪಂದ್ಯಗಳು ಬಾಕಿ ಉಳಿದಿವೆ. ಇದಕ್ಕಾಗಿ ಬಿಸಿಸಿಐ ಕನಿಷ್ಠ 20 ದಿನಗಳ ಕಾಲವಕಾಶ ಬಯಸಿದೆ. ಆದರೆ ಟೂರ್ನಿ ಪುನರಾರಂಭಕ್ಕೆ ಮುನ್ನ ಕ್ವಾರಂಟೈನ್‌ನಿಂದಾಗಿ ಕೆಲ ದಿನಗಳ ಬಿಡುವು ಬೇಕಾಗುತ್ತದೆ. ಹೀಗಾಗಿ ಒಟ್ಟಾರೆ ಒಂದು ತಿಂಗಳ ಕಾಲಾವಕಾಶ ಅವಶ್ಯವಾಗಿವೆ.
ಇಂಗ್ಲೆಂಡ್‌ನಲ್ಲಿ ಐಪಿಎಲ್?
ಸದ್ಯದ ಯೋಜನೆಯ ಪ್ರಕಾರ ಬಿಸಿಸಿಐ ಈ ಬಾರಿ ಇಂಗ್ಲೆಂಡ್‌ನಲ್ಲೇ ಐಪಿಎಲ್ ಆಯೋಜನೆಗೆ ಮೊದಲ ಆದ್ಯತೆ ನೀಡಿದೆ. ಯುಎಇ ಮತ್ತು ಶ್ರೀಲಂಕಾವನ್ನು ಐಪಿಎಲ್‌ಗೆ ಮೀಸಲು ಬದಲಿ ತಾಣವಾಗಿ ಇಟ್ಟುಕೊಂಡಿದೆ. ಐಪಿಎಲ್ ಆತಿಥ್ಯಕ್ಕಾಗಿ ಇಂಗ್ಲೆಂಡ್‌ನ 4 ಕೌಂಟಿ ತಂಡಗಳಾದ ಮಿಡ್ಲ್‌ಸೆಕ್ಸ್, ಸರ‌್ರೆ, ವಾರ್ವಿಕ್‌ಶೈರ್ ಮತ್ತು ಲಂಕಾಶೈರ್‌ನಿಂದ ಬಿಸಿಸಿಐಗೆ ಈಗಾಗಲೆ ಆಹ್ವಾನ ಬಂದಿದೆ. ಐಪಿಎಲ್ ನೇರಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಕೂಡ ಇಂಗ್ಲೆಂಡ್‌ನಲ್ಲಿ ಟೂರ್ನಿ ಆಯೋಜನೆಗೆ ಬೆಂಬಲ ಸೂಚಿಸಿದೆ. ಇಂಗ್ಲೆಂಡ್‌ನಲ್ಲಿ ಐಪಿಎಲ್ ಆಯೋಜಿಸುವುದು ವೆಚ್ಚ ಹೆಚ್ಚಿಸಲಿದೆ. ಆದರೆ ಪ್ರೇಕ್ಷಕರಿಗೂ ಪ್ರವೇಶ ನೀಡುವ ಅವಕಾಶ ಇರುವುದರಿಂದ, ಟಿಕೆಟ್ ಮಾರಾಟದ ಆದಾಯದಿಂದ ಈ ವೆಚ್ಚ ಸರಿದೂಗಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಸಿಸಿಐ ಹೊಂದಿದೆ.