ಅಗಲಿದ ಪತಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಪತ್ನಿ! ನಿತ್ಯವು ನಡೆಯುತ್ತೆ ಗಂಡನ ಆರಾಧನೆ

Wife
Published on

ವಿಜಯವಾಡ: ಕಷ್ಟ-ಸುಖಗಳನ್ನು ಸಮನಾಗಿ ಹಂಚಿಕೊಂಡು ಸಮಸ್ಯೆ ಅಂತಾ ಬಂದಾಗ ಒಬ್ಬರಿಗೊಬ್ಬರು ಆಸರೆಯಾಗಿ ಜೀವನದ ಕೊನೆಯವರೆಗೂ ಒಟ್ಟಿಗೆ ಬದುಕು ಸಾಗಿಸುವ ಸತಿ-ಪತಿಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು ಎಂಬುದನ್ನು ಆಂಧ್ರ ಪ್ರದೇಶ ಮಹಿಳೆಯೊಬ್ಬಳು ಸಾಬೀತು ಮಾಡಿದ್ದಾರೆ.

ಅನೈತಿಕ ಸಂಬಂಧ, ಜಗಳ, ಕೊಲೆ, ವೈಮನಸ್ಸು ಹಾಗೂ ವಿಚ್ಛೇದನದಂತಹ ಸುದ್ದಿಗಳೇ ಹೆಚ್ಚಾಗಿರುವ ಕಾಲದಲ್ಲಿ ಆಂಧ್ರದ ಮಹಿಳೆ ಸತಿ-ಪತಿಯ ಸಂಬಂಧಕ್ಕೆ ಅರ್ಥವನ್ನು ನೀಡಿದ್ದಾರೆ. ಹೌದು, ಮಹಿಳೆಯೊಬ್ಬಳು ಮೃತ ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ದೇವಸ್ಥಾನವನ್ನೇ ನಿರ್ಮಿಸಿದ್ದು, ನಿತ್ಯವು ಗಂಡನ ಆರಾಧನೆ ಮಾಡುತ್ತಿದ್ದಾಳೆ.

ವಿವರಣೆಗೆ ಬರುವುದಾದರೆ, ಅಂಕಿ ರೆಡ್ಡಿ ಮತ್ತು ಪದ್ಮಾವತಿ ದಂಪತಿ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಪೊಡಿಲಿ ಮಂಡಲದ ನಿಮ್ಮಾವರಂ ಮೂಲದ ನಿವಾಸಿಗಳು. ನಾಲ್ಕು ವರ್ಷಗಳ ಹಿಂದೆ ಅಂಕಿ ರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಪ್ರೀತಿಯ ಗಂಡನ ಅನುಪಸ್ಥಿತಿಯನ್ನು ಮರೆಯಲಾಗದ ಪದ್ಮಾವತಿ, ಆತನ ಶಾಶ್ವತ ನೆನಪಿಗಾಗಿ ಏನು ಮಾಡಲಿ ಎಂದು ಯೋಚಿಸಿದ್ದಾಳೆ.

ಇದಾದ ಬಳಿಕ ಒಂದು ನಿರ್ಧಾರಕ್ಕೆ ಬಂದ ಪದ್ಮಾವತಿ, ಮಾರ್ಬಲ್​ನಿಂದ ಗಂಡನ ಪ್ರತಿಮೆಯನ್ನು ತಯಾರಿಸಿ, ದೇವಸ್ಥಾನವನ್ನೇ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ದಿನನಿತ್ಯವೂ ಗಂಡನ ಪೂಜೆ ಮಾಡುತ್ತಾ ಬರುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪದ್ಮಾವತಿ ನನ್ನ ಗಂಡ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಹೀಗಾಗಿ ನಾನು ದೇವಸ್ಥಾನವನ್ನು ನಿರ್ಮಾಣ ಮಾಡಿ ದಿನವೂ ಪತಿಯ ಧ್ಯಾನದಲ್ಲಿ ತೊಡಗಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net