ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್​ ಅಧಿಕಾರಿ, ಪತ್ನಿ ಸಾವು: ಪವಾಡವೆಂಬಂತೆ ಬದುಕುಳಿದ ಮಕ್ಕಳು

Accident
Published on

ಹೈದರಾಬಾದ್​: ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್​ ಅಧಿಕಾರಿ ಮತ್ತವರ ಪತ್ನಿ ದಾರುಣ ಸಾವಿಗೀಡಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರ್ಮೆಟ್​ನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.

ಅಪಘಾತದಲ್ಲಿ ಪೊಲೀಸ್​ ಅಧಿಕಾರಿ ಲಕ್ಷ್ಮಣ್​​ (39) ಮತ್ತು ಪತ್ನಿ ಝಾನ್ಸಿ (34) ಮೃತಪಟ್ಟಿದ್ದಾರೆ. ಸುಲ್ತಾನ್​ ಬಜಾರ್​ ಪೊಲೀಸ್​ ಠಾಣೆಯಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣ್​ ಹೈದರಾಬಾದ್​ನ ಕೊಟ್ಟಪೇಟೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

ಮಗ ಸಾಹಸ ಮತ್ತು ಮಗಳು ಆಕಾಂಕ್ಷಾ ಜತೆ ಕುಟುಂಬ ಸಮೇತರಾಗಿ ಮೂರು ದಿನಗಳ ಹಿಂದೆ ಸೂರ್ಯಪೇಟೆ ಜಿಲ್ಲೆಯ ಪೆನ್​ಪಹಾದ್​ ವಲಯದ ನಗುಲಪತಿಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಸಂಬಂಧಿಕರ ಒತ್ತಾಯದ ಮೇರೆಗೆ ಮಗಳನ್ನು ಅಲ್ಲಿಯೇ ಬಿಟ್ಟು, ಶುಕ್ರವಾರ ರಾತ್ರಿ ಹೈದರಾಬಾದ್​ಗೆ ಹಿಂದಿರುಗುತ್ತಿದ್ದರು.

ಈ ವೇಳೆ ಝಾನ್ಸಿ ಕಾರು ಓಡಿಸುತ್ತಿದ್ದರು. ಲಕ್ಷ್ಮಣ್ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಹಿಂದಿನ ಸೀಟಿನಲ್ಲಿ ಮಗ ಸಾಹಸ ಕುಳಿತಿದ್ದನು. ಮಧ್ಯರಾತ್ರಿ ನಿಯಂತ್ರಣ ಕಳೆದುಕೊಂಡ ಕಾರು ಅಬ್ದಲ್ಲಾಪುರ್​ ಉಪನಗರದ ಇನಾನ್​ಗುಡ ಗೇಟ್​ ರಸ್ತೆ ಬಂದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಗಂಭೀರವಾರ ಗಾಯಗೊಂಡು ಲಕ್ಷ್ಮಣ್​ ಮತ್ತು ಝಾನ್ಸಿ ಮೃತಪಟ್ಟರೆ. ಸ್ವಲ್ಪವೂ ಏಟಾಗದೇ ಮಗ ಸಾಹಸ ಪವಾಡವೆಂಬಂತೆ ಬದುಕುಳಿದಿದ್ದಾನೆ. ಆದರೂ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಕ್ಕಳು ಇದೀಗ ಅನಾಥರಾಗಿದ್ದಾರೆ. ಮೃತದೇಹಗಳನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net