

ಪಣಜಿ: ಗೋವಾದ ಕಾನಕೊನಾ ದಾಮ್ ಏರಿಯಾದಲ್ಲಿ 2020ರಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಲ್ ಕಂ ನಟಿ ಪೂನಂ ಪಾಂಡೆ ಹಾಗೂ ಅವರ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ ಗೋವಾ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕಾನಕೋನಾದ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಮುಂದೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್ ಶೀಟ್ ಪ್ರಕಾರ, ಪೂನಂ ಪಾಂಡೆ ಅವರು ಸಾರ್ವಜನಿಕವಾಗಿ ಅಸಭ್ಯ ರೀತಿಯಲ್ಲಿ ನೃತ್ಯ ಮಾಡುವ ಮತ್ತು ವರ್ತಿಸುವ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು ಎಂದು ಹೇಳಲಾಗಿದೆ.
ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ನೀಡಿದ ದೂರಿನ ಮೇರೆಗೆ ಕಾನಕೋನಾ ಪೊಲೀಸರು ಪೂನಂ ಹಾಗೂ ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ 2020ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋವಾದ ಚಾಪೋಲಿ ಅಣೆಕಟ್ಟಿನ ಬಳಿ ನಟಿ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿದ್ದರು. ಇದೇ ಪ್ರಕರಣದಲ್ಲಿ ಪೂನಂ ಮತ್ತು ಸ್ಯಾಮ್ ಅವರನ್ನು 2020ರ ನವೆಂಬರ್ ತಿಂಗಳಲ್ಲಿ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಈ ಪ್ರಕರಣದಲ್ಲಿ 39 ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಐಪಿಸಿ ಸೆಕ್ಷನ್ 447, 292, 293, 294 ಅಡಿಯಲ್ಲಿ ಅಶ್ಲೀಲತೆ, ಅತಿಕ್ರಮಣ, ಅಶ್ಲೀಲ ವಿಡಿಯೋ ಪ್ರಸಾರ ಮತ್ತು ಮಹಿಳೆಯರ ಮಾನನಷ್ಟಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)