ರಿಂಗ್​​ರೋಡ್​ ಬಳಿಯಿದ್ದ ಕಾರಿನಲ್ಲಿ ಓರ್ವ ಯುವತಿ, ಇಬ್ಬರು ಯುವಕರು: ವಿಚಾರಿಸಿದ ಪೊಲೀಸರಿಗೆ ಕಾದಿತ್ತು ಶಾಕ್​​!

Car
Published on

ಹೈದರಾಬಾದ್​: ಸಂಜೆ ಸಮಯದಲ್ಲಿ ನಗರದ ಹೊರವಲಯದ ರಿಂಗ್​ರೋಡ್​ನಲ್ಲಿ ನಿಂತಿದ್ದ ಕಾರೊಂದರಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಿಸಿದಾಗಿ ಶಾಕಿಂಗ್​ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಈ ಘಟನೆ ತೆಲಂಗಾಣದ ಉಪನಗರ ಘಾಟ್ಕೇಸರದ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ.

ಹುಮಾಯುನ್​ ನಗರ ಕಾಲನಿಯ ಮೆಹದಿಪಟ್ಟಣದ ಮೊಹಮ್ಮದ್​ ಜಮೀರ್​ ಸಿದ್ದಿಕ್​ (28), ಅಲ್ಮಸ್ಗುಡ ಶೇಶಾದ್ರಿ ನಗರದ ಅಖಿಲ್​ (31) ಮತ್ತು ಹಫೀಜ್​ಪೇಟೆಯ ನಿವಾಸಿ ರಮ್ಯಾ (32) ಬಂಧಿತ ಆರೋಪಿಗಳು. ಮೂವರು ಕೂಡ ಕ್ಲಬ್​ಹೌಸ್​ ಮೂಲಕ ಪರಿಚಿತರು. ಇದಕ್ಕೂ ಮೊದಲು ಸಿದ್ದಿಕ್​ ಮತ್ತು ಅಖಿಲ್​ ಪ್ರಿಸಂ ಪಬ್​ನಲ್ಲಿ ಭೇಟಿಯಾಗಿದ್ದರು. ಅಖಿಲ್​ ಗೋವಾದಿಂದ ತಂದಿದ್ದ ಡ್ರಗ್ಸ್​ ಅನ್ನು ಮೂವರು ಕೂಡ ಈ ಹಿಂದೆ ಸೇವಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಎದುರಾಗಲಿರುವ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಡ್ರಗ್ಸ್​ ತೆಗೆದುಕೊಳ್ಳಲೆಂದು ಎರಡು ದಿನಗಳ ಹಿಂದೆ ಸಿದ್ದಿಕ್​ ಮತ್ತು ರಮ್ಯಾ ಗೋವಾಗೆ ಹೋಗಿದ್ದರು.

ಗೋವಾದಿಂದ ತಂದಂತಹ ಡ್ರಗ್ಸ್​ ಅನ್ನು ಹಂಚಿಕೊಳ್ಳಲು ಮೂವರು ಕೂಡ ಘಾಟ್ಕೇಸರ ಏರಿಯದಲ್ಲಿರುವ ಹೊರವರ್ತುಲ ರಸ್ತೆಯ ಬಳಿ ಹೋಗಿದ್ದರು. ಓರ್ವ ಯುವತಿ ಮತ್ತು ಇಬ್ಬರು ಯುವಕರು ಕಾರಿನಲ್ಲಿರುವುದನ್ನು ಕಂಡ ಅಲ್ಲಿನ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಅವರಿಂದ ಡ್ರಗ್ಸ್​ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net