ಒಮಿಕ್ರಾನ್​ ಎಲ್ಲರನ್ನು ಕೊಲ್ಲಲಿದೆ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವೈದ್ಯ!

Omicron
Published on

ಕಾನ್ಪುರ: ಕರೊನಾ ವೈರಸ್​ ರೂಪಾಂತರಿ ಒಮಿಕ್ರಾನ್​ ಎಲ್ಲರನ್ನು ಕೊಲ್ಲಲಿದೆ ಎಂಬ ಭೀತಿಯಲ್ಲೇ ವೈದ್ಯನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆರೋಪಿ ವೈದ್ಯ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ.

ಕೊಲೆ ನಡೆದ ಸ್ಥಳದಲ್ಲಿ ವೈದ್ಯ ಬರೆದಿಟ್ಟಿರುವ ಡೈರಿಯೊಂದು ಪತ್ತೆಯಾಗಿದೆ. ಅದರಲ್ಲಿ ಒಮಿಕ್ರಾನ್​ ರೂಪಾಂತರಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವೈದ್ಯ, ನನ್ನ ನಿರ್ಲಕ್ಷ್ಯದಿಂದ ಒಮಿಕ್ರಾನ್​ ಎಲ್ಲರನ್ನು ಬಲಿ ಪಡೆದುಕೊಳ್ಳುತ್ತದೆ. ತಪ್ಪಿಸಿಕೊಳ್ಳಲು ಕಷ್ಟವಾಗಿರುವ ಕೇಂದ್ರದಲ್ಲಿ ನಾನು ಸಿಲುಕಿಕೊಂಡಿದ್ದೇನೆಂದು ವೈದ್ಯ ಬರೆದಿದ್ದಾನೆ.

ಇನ್ನು ಆರೋಪಿ ವೈದ್ಯ ಹಲವು ವರ್ಷಗಳಿಂದ ಖಿನ್ನತೆಗೆ ಜಾರಿದ್ದರು ಎಂದು ತಿಳಿದುಬಂದಿದೆ. ವೈದ್ಯನ ಹೆಸರು ಡಾ. ಸುಶೀಲ್​ ಕುಮಾರ್​. ಇವರು ಕಾನ್ಪುರದ ಆಸ್ಪತ್ರೆಯೊಂದರಲ್ಲಿ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥರಾಗಿದ್ದರು. 48 ವರ್ಷದ ಪತ್ನಿ, 18 ವರ್ಷದ ಮಗ ಮತ್ತು 15 ವರ್ಷದ ಮಗಳನ್ನು ಕೊಲೆ ಮಾಡಿದ್ದಾರೆ. ಬಳಿಕ ತನ್ನ ಸಹೋದರನಿಗೆ ಮಸೇಜ್​ ಮಾಡಿ ಪೊಲೀಸರಿಗೆ ಕಾಲ್​ ಮಾಡು ಎಂದಿದ್ದಾನೆ. ಸಹೋದರ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳುವ ಮುನ್ನ ಸುಶೀಲ್​ ಕುಮಾರ್​ ಅಲ್ಲಿಂದ ಪರಾರಿಯಾಗಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ತದ ಕಲೆಯಿದ್ದ ಸುತ್ತಿಗೆಯು ಸಹ ಸಮೀಪದಲ್ಲೇ ಪತ್ತೆಯಾಗಿದೆ. ಡೈರಿಯು ಸಹ ಸಿಕ್ಕಿದ್ದು, ತಾನು ಗುಣಪಡಿಸಲಾಗದ ರೋಗದಿಂದ ಬಳಲುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತಮ್ಮ ಕುಟುಂಬವನ್ನು ತೊಂದರೆಯಲ್ಲಿ ಬಿಡಲು ಸಾಧ್ಯವಿಲ್ಲ. ಆದ್ದರಿಂದ, ಪ್ರತಿಯೊಬ್ಬರನ್ನು ವಿಮೋಚನೆಯ ಹಾದಿಯಲ್ಲಿ ಇರಿಸಿರುವುದಾಗಿ ಡೈರಿಯಲ್ಲಿ ಬರೆದಿದ್ದಾರೆ.

ಪ್ರಾಥಮಿಕವಾಗಿ ಪೊಲೀಸರು ವೈದ್ಯನ ಡೈರಿಯನ್ನು ಆತ್ಮಹತ್ಯೆ ಟಿಪ್ಪಣಿ ಎಂದು ಪರಿಗಣಿಸುತ್ತಿದ್ದಾರೆ. ಕೊಲೆ ಮಾಡಿದ ನಂತರ ವೈದ್ಯನ ಕೂಡ ನೀರಿನಲ್ಲಿ ಮುಳುಗಿಯೋ ಅಥವಾ ಇನ್ನಾವುದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿದ್ದಾರೆ. ಗಂಗಾನದಿಯಲ್ಲಿ ವೈದ್ಯರ ಮೃತದೇಹಕ್ಕಾಗಿ ಮುಳುಗು ತಜ್ಞರು ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net