ಮೊದಲ ಬಾರಿಗೆ ಸಾರ್ವಜನಿಕವಾಗಿ ಮಗುವಿನ ತಂದೆ ಬಗ್ಗೆ ಮಾತನಾಡಿದ ಸಂಸದೆ ನುಸ್ರತ್‌ ಜಹಾನ್‌..!

Nusrath
Published on

ಕೋಲ್ಕತಾ: ಗರ್ಭಿಣಿಯಾದ ನಂತರ ಮಗು ಯಾರದ್ದು ಎಂದು ತಿಳಿಯದೇ ಭಾರಿ ಟ್ರೋಲ್‌ಗೆ ಒಳಗಾಗಿದ್ದ ವಿವಾದಿತ ನಟಿ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ನುಸ್ರತ್‌ ಜಹಾನ್‌ ಆಗಸ್ಟ್​ 26ರಂದು ಗಂಡುಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮಗುವಿನ ತಂದೆಯ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.

ಇಂದು ಮಾಧ್ಯಮಗಳ ಮುಂದೆ ಮಾತನಾಡುವಾಗ ನಿಮ್ಮ ಮಗುವಿನ ಮುಖವನ್ನು ತೋರಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ನುಸ್ರುತ್​, ಮಗುವಿನ ಬಗ್ಗೆ ನೀವು ಅವರ ತಂದೆಯನ್ನು ಕೇಳಬೇಕು. ಮಗುವನ್ನು ನೋಡಲು ಅವರ ತಂದೆ ಬಿಡುವುದಿಲ್ಲ ಎಂದು ನುಸ್ರುತ್​ ಹೇಳಿದ್ದಾರೆ. ಆದರೆ, ತಂದೆಯ ಹೆಸರಾಗಲಿ ಅಥವಾ ಬೇರೆ ಮಾಹಿತಿಯಾಗಲಿ ನುಸ್ರುತ್​ ನೀಡಲಿಲ್ಲ.

ಮುಸ್ಲಿಂ ಸಮುದಾಯಕ್ಕೆ ಸೇರಿರುವ ನುಸ್ರತ್‌ ಅವರು, 2019ರಲ್ಲಿ ಟರ್ಕಿಯಲ್ಲಿ ಹೋಗಿ ಉದ್ಯಮಿ ನಿಖಿಲ್‌ ಜೈನ್‌ ಅವರನ್ನು ಮದುವೆಯಾಗಿದ್ದರು. ಆದರೆ ಭಾರತಕ್ಕೆ ಬಂದು ಎಷ್ಟೇ ಹೇಳಿದರೂ ಈ ವಿವಾಹವನ್ನು ನೋಂದಣಿ ಮಾಡಲು ಆಕೆ ತಯಾರು ಇರಲಿಲ್ಲ. ಈ ನಡುವೆಯೇ ಆರೇಳು ತಿಂಗಳಿನಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಇರಲಿಲ್ಲ. ಆದರೂ ಆಕೆ ಗರ್ಭ ಧರಿಸಿ, ಭಾರಿ ಟ್ರೋಲ್‌ ಆಗಿದ್ದರು.

ಸಂಸದೆಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನಿಖಿಲ್‌ ಜೈನ್‌ ತಮ್ಮ ಪತಿ ಎಂದಿದ್ದ ಇವರು ಸಂಸದೆಯಾಗಿ ಆಯ್ಕೆಯಾದ ಮೇಲೆ ಅವರು ನನ್ನ ಕಾನೂನುಬದ್ಧವಾಗಿ ಪತಿಯೇ ಅಲ್ಲ ಎಂದು ವಿವಾದ ಸೃಷ್ಟಿಸಿದ್ದರು. ಮುಸ್ಲಿಂ ಸಮಯದಾಯದ ಮತದ ಜತೆಗೆ ಚುನಾವಣೆಯಲ್ಲಿ ಹಿಂದೂ ಸಮುದಾಯದವರ ಮತವನ್ನು ಪಡೆಯುವುದಕ್ಕಾಗಿ ಜೈನ್‌ ಜೀವನದ ಜತೆ ಚೆಲ್ಲಾಟವಾಡಿದ್ದಾರೆ, ತಮ್ಮ ಹೆಸರಿನ ಮುಂದೆ ಹಿಂದೂ ಹೆಸರನ್ನು ಸೇರಿಸಿಕೊಂಡು ಹಿಂದೂಗಳ ವಿಶ್ವಾಸವನ್ನು ಗಳಿಸುವುದಕ್ಕಾಗಿ ಈ ರೀತಿ ಮಾಡಿದ್ದಾರೆ, ಸಂಸದೆಯಾಗಿ ಆಯ್ಕೆಯಾದ ಮೇಲೆ ಗಂಡನನ್ನು ಹೊರಕ್ಕೆ ಅಟ್ಟಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದವು.

ಇನ್ನು ಪಶ್ಚಿಮ ಬಂಗಾಳದ ಟಿಎಂಸಿ ಅಭ್ಯರ್ಥಿಯಾಗಿದ್ದ ಯಶ್‌ ದಾಸ್ ಗುಪ್ತಾ ಜತೆ ಹಲವಾರು ಕಡೆಗಳಲ್ಲಿ ಸುತ್ತಾಡುತ್ತ ಡೇಟಿಂಗ್‌ ಮಾಡುತ್ತಿದ್ದ ನುಸ್ರತ್‌ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಕೂಡ ಹೇಳಿದ್ದರು. ಆದರೆ ಗುಪ್ತಾ ಜತೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಪ್ರಸವದ ಸಮಯದಲ್ಲಿಯೂ ಗುಪ್ತಾ ತನ್ನ ಜತೆಯೇ ಇರಬೇಕು ಎಂದು ನುಸ್ರತ್‌ ಹೇಳಿದ್ದರು.

“ಭಯದ ನಡುವೆಯೂ ನಂಬಿಕೆ’ ಎಂಬ ಕ್ಯಾಪ್ಷನ್‌ ನೀಡಿ ತಾವು ತಾಯಿಯಾಗಿರುವ ವಿಷಯವನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದರು. ಆದರೆ ಇವರನ್ನು ಕಾಲೆಳೆಯುತ್ತಿರುವವರು ಮಾತ್ರ ಮಗು ಹುಟ್ಟಿದ ಮೇಲಾದರೂ ಅದರ ಅಪ್ಪ ಯಾರು ಎಂದು ನಿಮಗಾದರೂ ತಿಳಿದಿದೆಯೇ ಎಂದು ಪ್ರಶ್ನಿಸಿದ್ದರು. ಇಂದು ಮೊದಲ ಬಾರಿಗೆ ಮಗುವಿನ ತಂದೆಯ ಬಗ್ಗೆ ನುಸ್ರುತ್​ ಮಾತನಾಡಿದರೂ ಕೂಡ ಹೆಚ್ಚೇನು ಮಾಹಿತಿ ನೀಡದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಕೂತೂಹಲವನ್ನು ಹಾಗೇ ಉಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net