

ವಿಜಯವಾಡ: ಆಂಧ್ರ ಪ್ರದೇಶದ ಗ್ರಾಮವೊಂದು ಸಂಪೂರ್ಣ ಲಾಕ್ಡೌನ್ ಆಗಿದೆ. ಆದರೆ, ಕರೊನಾ ಕಾರಣಕ್ಕೆ ಇಡೀ ಗ್ರಾಮ ಲಾಕ್ಡೌನ್ ಆಗಿಲ್ಲ ಎಂಬುದೇ ಅಚ್ಚರಿಯ ಸಂಗತಿ. ಕೇವಲ ಒಂದೇ ತಿಂಗಳಲ್ಲಿ ಗ್ರಾಮದ ನಾಲ್ವರು ನಿಗೂಢವಾಗಿ ಮೃತಪಟ್ಟಿರುವುದರಿಂದ ಇಡೀ ಗ್ರಾಮವನ್ನೇ ಲಾಕ್ಡೌನ್ ಮಾಡಿದ್ದು, ಮಾಂಸ ತಿನ್ನುವ ರಾಕ್ಷಸ ಅಥವಾ ಪಿಶಾಚಿಯೇ ಇದಕ್ಕೆಲ್ಲ ಕಾರಣ ಎಂದು ಗ್ರಾಮಸ್ಥರು ನಂಬಿದ್ದಾರೆ.
ಗ್ರಾಮದ ಸರ್ಕಾರಿ ಕಚೇರಿಗಳು ಸಹ ಬಂದ್ ಆಗಿವೆ. ಗ್ರಾಮಕ್ಕೆ ಹೊರಗಿನವರಿಗೆ ಅನುಮತಿಯೇ ಇಲ್ಲ. ಹೊರಗಿನಿಂದ ಯಾರೂ ಬರಬಾರದು ಅಂತಾ ಗ್ರಾಮದ ಸುತ್ತ ಬೇಲಿಯನ್ನು ನಿರ್ಮಿಸಲಾಗಿದೆ. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಸಹ ಮುಚ್ಚಲಾಗಿದೆ. ಶಿಕ್ಷಕರು, ವೈದ್ಯಕೀಯ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೂ ಗ್ರಾಮದ ಪ್ರವೇಶವನ್ನು ನಿರಾಕರಿಸಲಾಗಿದೆ.
ಅಂದಹಾಗೆ ಲಾಕ್ಡೌನ್ ಆಗಿರುವ ಗ್ರಾಮವು ಆಂಧ್ರವು ಒಡಿಶಾದೊಂದಿಗೆ ಗಡಿ ಹಂಚಿಕೊಂಡಿರುವ ಶ್ರೀಕಾಕುಳಂ ಜಿಲ್ಲೆಯ ಸರುಬುಜ್ಜಿಲಿ ಮಂಡಲದ ವ್ಯಾಪ್ತಿಯಲ್ಲಿ ಬರುತ್ತದೆ. ಭೂತ, ಪಿಶಾಚಿಗಳ ವಿರುದ್ಧ ಲಾಕ್ಡೌನ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಜನರು ನಂಬಿರುವುದು ಅಚ್ಚರಿ ಎನಿಸಿದೆ. ಗ್ರಾಮದ ಕೆಲ ಜನರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಈಗಾಗಲೇ ನಾಲ್ವರನ್ನು ಕಳೆದುಕೊಂಡಿದೆ. ದೆವ್ವ, ಪಿಶಾಚಿ ಅಥವಾ ಮಾಂಸ ತಿನ್ನುವ ರಾಕ್ಷಸನಿಂದಲೇ ಇಷ್ಟೆಲ್ಲ ನಡೆಯುತ್ತಿದೆ ಎಂದು ಜನರು ನಂಬಿದ್ದಾರೆ.
ಗ್ರಾಮದ ಹಿರಿಯರು ಈಗಾಗಲೇ ಒಡಿಶಾ ಮೂಲದ ಸ್ವಾಮೀಜಿಯನ್ನು ಸಂಪರ್ಕಿಸಿದ್ದು, ಅವರ ಸೂಚನೆಯಿಂದಲೇ ಲಾಕ್ಡೌನ್ ಮಾಡಿದ್ದಾರೆ. ಅಲ್ಲದೆ, ಊರಿನ ನಾಲ್ಕು ಕಡೆ ನಿಂಬೆ ಹಣ್ಣುಗಳನ್ನು ಇಟ್ಟಿದ್ದಾರೆ. ಏಪ್ರಿಲ್ 17 ರಿಂದ 25ರವರೆಗೆ ಗ್ರಾಮದಲ್ಲಿ ಲಾಕ್ಡೌನ್ ಇರಲಿದೆ. ಗ್ರಾಮದ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಹೊರಗಿನಿಂದ ಯಾರೊಬ್ಬರು ಒಳ ಬರಲು ಸಾಧ್ಯವೇ ಇಲ್ಲದಂತಾಗಿದೆ. ಈ ನಿಗೂಢ ಘಟನೆಯು ಜಿಲ್ಲೆಯಾದ್ಯಂತ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ಇನ್ನು ಕೆಲವು ಇದೆಲ್ಲ ನಂಬಲಾಗದು ಎಂದಿದ್ದಾರೆ. ಒಟ್ಟಿನಲ್ಲಿ ನಿಗೂಢ ಸಾವಿನಿಂದಾಗಿ ಗ್ರಾಮವೇ ಲಾಕ್ಡೌನ್ ಆಗಿದೆ. (ಏಜೆನ್ಸೀಸ್)