

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ಬಾಲಕಿಯರ ಶಾಲೆಯ ಟಾಯ್ಲೆಟ್ ಅನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಲ್ಲಿ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವತಃ ಸಂಸದರೇ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಯುವ ಮೊರ್ಚಾ ಸೇವಾ ಪಾಖವಾಡ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಘಟಕವು ಖಟ್ಖಾರಿ ಬಾಲಕಿಯರ ಶಾಲೆಯಲ್ಲಿ ಟಾಯ್ಲೆಟ್ಗಳನ್ನು ಶುಚಿಗೊಳಿಸಿತು ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಸಂಸದರು ಬಿಜೆಪಿ ಯುವ ಘಟಕದ ಅಭಿಯಾನದಲ್ಲಿ ಭಾಗವಹಿಸಲು ಶಾಲೆಗಳಿಗೆ ಭೇಟಿ ನೀಡಿದಾಗ, ಕೊಳಕು ಟಾಯ್ಲೆಟ್ ಅನ್ನು ಗಮನಿಸಿದ ಅವರು ತಮ್ಮ ಕೈಗಳನ್ನು ಬಳಸಿ ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು.
ಈ ಬಗ್ಗೆ ಮಾಧ್ಯಮದ ಜೊತೆ ಮಾಡಿರುವ ಅವರು, ನಾನು ಶಾಲೆಗೆ ಭೇಟಿ ನೀಡಿದಾಗ ಟಾಯ್ಲೆಟ್ ಕೊಳಕಾಗಿರುವುದನ್ನು ನೋಡಿದೆ. ಹಾಗಾಗಿ, ನಾನು ಅದನ್ನು ಸ್ವಚ್ಛಗೊಳಿಸಿದೆ. ಇದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಸದ್ಯ ಸಂಸದರು ಟಾಯ್ಲೆಟ್ ಶುಚಿಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್)