

ಹೈದರಾಬಾದ್: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದ ನೀರಿನಲ್ಲಿ ನವವಿವಾಹಿತೆ ಸೇರಿದಂತೆ ಸುಮಾರು 7 ಮಂದಿ ಕೊಚ್ಚಿ ಹೋಗಿದ್ದಾರೆ.
ಮದುವೆ ನಂತರದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನವದಂಪತಿ ಪ್ರವಲಿಕಾ ಮತ್ತು ನವಾಜ್ ರೆಡ್ಡಿ ಇತರೆ ನಾಲ್ಕು ಮಂದಿಯೊಂದಿಗೆ ಕಾರಿನಲ್ಲಿ ವಿಕಾರಾಬಾದ್ನಲ್ಲಿ ಪ್ರಯಾಣಿಸುವಾಗ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನವವಿವಾಹಿತೆಯ ನಾದಿನಿ ಶ್ವೇತಾ ಮತ್ತು ಆಕೆಯ ಮಗ ತ್ರೀನಾಥ್ ರೆಡ್ಡಿ (8) ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇನ್ನೊಬ್ಬ ಹುಡುಗನ ಗುರುತು ಪತ್ತೆಯಾಗಿಲ್ಲ.
ಭಾರೀ ಮಳೆಯ ಬಳಿಕ ಭಾನುವಾರ ರಾತ್ರಿ ವಾರಂಗಲ್ನ ಚರಂಡಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ದೇಹ ಪತ್ತೆಯಾಗಿತ್ತು. ಮೃತನನ್ನು ಶಿವನಗರ ಮೂಲದ ವೊರ್ರೊಮ್ ಕ್ರಾಂತಿ ಕುಮಾರ್ ಎಂದು ಗುರುತಿಸಲಾಗಿದೆ. ಆತನ ಲ್ಯಾಪ್ಟಾಪ್ ಸಹ ಸ್ಥಳದಲ್ಲಿ ಪತ್ತೆಯಾಗಿದೆ.
ಮತ್ತೊಂದು ಘಟನೆಯಲ್ಲಿ 70 ವರ್ಷದ ಹಿರಿಯ ವ್ಯಕ್ತಿಯ ಕಾರು ಶಂಕರಪಲ್ಲಿಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದೆ. 30 ವರ್ಷದ ಕೂಲಿ ಕಾರ್ಮಿಕನು ಕೂಡ ಆದಿಲ್ಬಾದ್ನಲ್ಲಿ ಮಳೆ ಪ್ರವಾಹದಿಂದ ಮೃತಪಟ್ಟಿದ್ದಾನೆ. ಸ್ಕೂಟರ್ ಚಲಾಯಿಸುತ್ತಿದ್ದ ಇಬ್ಬರು ಯುವತಿಯರು ಕೂಡ ಯಾದಾದ್ರಿ ಭೋಂಗಿರ್ ಜಿಲ್ಲೆಯಲ್ಲಿ ನೀರಿನ ಸೆಳೆತಕ್ಕೆ ಕಣ್ಮರೆಯಾಗಿದ್ದಾರೆ.
ನೈರುತ್ಯ ಮುಂಗಾರು ಚುರುಕಾಗಿರುವುದರಿಂದ ವಿಕಾರಾಬಾದ್, ರಂಗಾರೆಡ್ಡಿ ಮತ್ತು ಸಿದ್ದಿಪೇಟೆಯಲ್ಲಿ ಭಾರೀ ಮಳೆಯಾಗಿದೆ. ಹೈದರಾಬಾದ್, ಆದಿಲಾಬಾದ್, ನಿಜಾಮಾಬಾದ್, ಕರೀಂನಗರ, ವಾರಂಗಲ್ ಮತ್ತು ಖಮ್ಮಂನಲ್ಲಿ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. (ಏಜೆನ್ಸೀಸ್)