ದೇಶದ ಅತಿ ಕಿರಿಯ ಮೇಯರ್​ಗೂ ರಾಜ್ಯದ ಅತಿ ಕಿರಿಯ ಶಾಸಕನಿಗೂ ಮದುವೆ..!

Kerala MLA Mayor
Published on

ಕೊಯಿಕ್ಕೋಡ್​: ದೇಶದ ಅತಿ ಕಿರಿಯ ಮೇಯರ್​ ಹಾಗೂ ಅತಿ ಕಿರಿಯ ಶಾಸಕರ ನಡುವೆ ಮದುವೆ ನಿಗದಿಯಾಗಿದ್ದು, ದೇಶದಲ್ಲೇ ವಿನೂತನ ಮದುವೆ ಸಂಭ್ರಮಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಲಿದೆ.

ತಿರುವನಂತಪುರದ ಮೇಯರ್​ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್​ (28) ವಿವಾಹ ಮಾಡಿಕೊಳ್ಳಲಿದ್ದಾರೆ. ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ.

ಈ ಬಗ್ಗೆ ಮಾತನಾಡಿರುವ ಶಾಸಕ ಸಚಿನ್​ ತಂದೆ ಕೆ.ಎಂ. ನಂದಕುಮಾರ್​, ಇನ್ನು ಮದುವೆ ದಿನಾಂಕ ಘೋಷಣೆಯಾಗಿಲ್ಲ. ಆದರೆ, ಎರಡು ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿವೆ. ಸಚಿನ್​ ಕೇರಳ ವಿಧಾನಸಭೆಯ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನೊಂದೆಡೆ ಆರ್ಯಾ ರಾಜೇಂದ್ರನ್ ದೇಶದ ಕಿರಿಯ ಮೇಯರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಎಸ್​ಎಫ್​ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್​ ದೇವ್ ಕೊಯಿಕ್ಕೋಡ್​ನ ನೆಲ್ಲಿಕೋಡ್​ ಮೂಲದವರು. ಎಸ್​ಎಫ್​ಐನ ರಾಜ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್​ ಅವರು ಕೊಯಿಕ್ಕೂಡ್​ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್​ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಮತ್ತು ಕೊಯಿಕ್ಕೋಡ್​ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.

ಆರ್ಯಾ ರಾಜೇಂದ್ರನ್​ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇಬ್ಬರ ಮದುವೆ ಫಿಕ್ಸ್​ ಆಗಿದ್ದು, ವಿನೂತನ ಮದುವೆಗೆ ಕೇರಳ ರಾಜ್ಯ ಸಾಕ್ಷಿಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net