

ಹೈದರಾಬಾದ್: ಮಾಜಿ ಮಿಸ್ ತೆಲಂಗಾಣ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರ ತಕ್ಷಣದ ಸ್ಪಂದನೆಯಿಂದ ತೆಲಂಗಾಣ ಸುಂದರಿಯ ಪ್ರಾಣ ಉಳಿದಿದೆ.
ಯುವತಿಯನ್ನು ಹಸಿನಿ ಎಂದು ಗುರುತಿಸಲಾಗಿದೆ. ಲೈವ್ ವಿಡಿಯೋವನ್ನು ನೋಡಿದ ಆಕೆಯ ಫ್ರೆಂಡ್ಸ್ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ ನಂ. 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ನಾರಾಯಣಗುಡ ಪೊಲೀಸರು ಆಕೆಯ ಸ್ಥಳಕ್ಕೆ ಧಾವಿಸಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಹಸಿನಿ ಅವರು ಹೈದರಾಬಾದ್ನ ಹಿಮಾಯತ್ನಗರದ 6ನೇ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಾರೆ. ರಕ್ಷಣೆಯ ಬೆನ್ನಲ್ಲೇ ಆಕೆಯನ್ನು ಹೈದರ್ಗುಡದಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಾಡೆಲ್ ಆಗಿರುವ ಹಸಿನಿ, 2018ರಲ್ಲಿ ಮಿಸ್ ತೆಲಂಗಾಣ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಯುವಕನೊಬ್ಬನ ವಿರುದ್ಧ ಹಸಿನಿ, ಲೈಂಗಿಕ ದೌರ್ಜನ್ಯ ನೀಡಿದ್ದಾನೆಂದು ಆರೋಪಿಸಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಸಿನಿ ಆತ್ಮಹತ್ಯೆಗೆ ಕಾರಣ ಏನೆಂದು ಹುಡುಕುವ ಪ್ರಯತ್ನದಲ್ಲಿದ್ದಾರೆ. ಯುವಕನ ವಿರುದ್ಧ ದೂರು ದಾಖಲಿಸಿದ ಕೆಲವೇ ದಿನಗಳಲ್ಲಿ ಆಕೆ ಆತ್ಮಹತ್ಯೆಗೆ ಯತ್ನಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)