

ನಿದ್ದೆಯಲ್ಲಿ ಕನವರಿಸುವುದು ಎಂತವರಿಗಾದರೂ ಒಂದಲ್ಲ ಒಂದು ದಿನ ಅನುಭವಕ್ಕೆ ಬಂದಿರುತ್ತದೆ. ಕೆಲವೊಮ್ಮೆ ನಿದ್ದೆಯಲ್ಲಿಯೇ ರಹಸ್ಯ ವಿಚಾರಗಳನ್ನು ಕನವರಿಸುತ್ತಾ ಸಿಕ್ಕಿಹಾಕಿಕೊಳ್ಳುವುದಿದೆ. ಇದೇ ರೀತಿ ಇಲ್ಲೊಬ್ಬ ಮಹಿಳೆಗೆ ತನ್ನ ಪ್ರಿಯಕರನ ಅಸಲಿ ಮುಖ ಗೊತ್ತಾಗಿದ್ದು ಕೂಡ ನಿದ್ದೆಯಲ್ಲಿಯೇ ಎಂದರೆ ನೀವಿದನ್ನು ನಂಬಲೇಬೇಕು.
ಹೌದು, ಆತ ತನಗೆ ಮೋಸ ಮಾಡುತ್ತಿರುವ ಸಂಗತಿಯನ್ನು ತಿಳಿದು ಮಹಿಳೆಯು ಆಘಾತಕ್ಕೊಳಗಾಗಿದ್ದಾಳೆ. ತನ್ನ ಗೆಳೆಯ ನಿದ್ದೆ ಮಾಡುತ್ತಿರುವಾಗ ಇನ್ನೊಬ್ಬ ಮಹಿಳೆಯ ಹೆಸರೇಳಿದ್ದನ್ನು ಕೇಳಿಸಿಕೊಂಡ ಮಹಿಳೆಯು ಆ ಬಗ್ಗೆ ಆತನಿಂದಲೇ ಬಾಯಿಬಿಡಿಸಿದ್ದು, ಪ್ರಿಯಕರ ಮುಚ್ಚಿಟ್ಟ ರಹಸ್ಯವೀಗ ಬಯಲಾಗಿದೆ.
‘ಆ ಹೆಸರು ಕೇಳಿ ನಾನು ಕೂಡಲೇ ಹಾಸಿಗೆಯಿಂದ ಎದ್ದೆ ಹಾಗೂ ಆ ಹೆಸರನ್ನು ಫೇಸ್‌ಬುಕ್‌ನಲ್ಲಿ ಹುಡುಕಿದಾಗ ಅವಳಿಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿರುವ ಮಾಹಿತಿ ನನಗೆ ತಿಳಿಯಿತು’ ಎಂದು ಹಂಟರ್ ಕೊಂಚ್ ಎಂಬಾಕೆ ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ.
ಮರುದಿನ ಬೆಳಿಗ್ಗೆ ಪ್ರಿಯಕರ ಎದ್ದಾಗ, ನಿದ್ದೆಯಲ್ಲಿ ಕನವರಿಸುತ್ತಿದ್ದ ಆ ಹೆಸರಿನ ಬಗ್ಗೆ ವಿಚಾರಿಸಿದ್ದಾಳೆ. ಅದಕ್ಕವನು ‘ಓಹ್ ಅವಳು ಮತ್ತು ನಾನು ಒಂದೇ ತರಗತಿಯಲ್ಲಿ ಒಟ್ಟಿಗೆ ಕಲಿತವರು’ ಎಂದು ಹೇಳಿ ಜಾರಿಕೊಂಡಿದ್ದಾನೆ.
ತನ್ನ ಸಂಗಾತಿ ತನ್ನಿಂದ ಏನೋ ಮುಚ್ಚಿಡುತ್ತಿದ್ದಾನೆ ಎಂದು ಹಂಟರ್‌ಗೆ ಅನುಮಾನ ಬಂದಿದೆ. ಕೂಡಲೇ ಹಂಟರ್, ಪ್ರಿಯಕರನು ಕನವರಿಸಿದ್ದ ಆ ಹೆಸರಿನ ಮಹಿಳೆಗೆ ದೂರವಾಣಿ ಕರೆ ಮಾಡಿ ಆತ ಆಕೆಯೊಂದಿಗೆ ಸಂವಹನ ನಡೆಸಿದ್ದನೇ ಎಂದು ಕೇಳಿದ್ದಾಳೆ.
ಅದಕ್ಕೆ ಉತ್ತರಿಸಿದ ಮಹಿಳೆ, ನೀನು ನಿನ್ನ ಕೆಲಸವನ್ನು ನೋಡಿಕೊ. ನೀನವನ ಮಾಜಿ ಪ್ರೇಯಸಿಯಷ್ಟೇ ಎಂದಿದ್ದಾಳೆ. ಇದಕ್ಕೆ ಆಘಾತಕೊಂಡ ಹಂಟರ್, ಕ್ಷಮಿಸಿ, ನಾನವನ ಮಾಜಿ ಪ್ರೇಯಸಿಯಲ್ಲ. ಅವನೀಗ ನನ್ನ ಮನೆಯಲ್ಲಿಯೇ ವಾಸವಾಗಿದ್ದಾನೆ. ನಾನವನ ಫೋನ್ ಬಿಲ್ ಪಾವತಿಸುತ್ತೇನೆ. ನನ್ನ ಕಾರನ್ನೇ ಅವನು ಕೆಲಸಕ್ಕೆ ತೆಗೆದುಕೊಂಡು ಹೋಗುತ್ತಾನೆ. ಅವನೀಗಲೂ ನನ್ನ ಪ್ರಿಯಕರ’ ಎಂದು ಹೇಳಿದ್ದಾಳೆ.
ಇಷ್ಟೇ ಅಲ್ಲದೆ ಇತರೆ ಮಹಿಳೆಯರಿಂದಲೂ ಪ್ರಿಯಕರನ ಕುರಿತಾಗಿ ಕೇಳಿದ ಹಂಟರ್, ಈಗ ಪ್ರಿಯಕರನಿಗೆ ತಕ್ಕ ಶಾಸ್ತಿ ಮಾಡಿ ಆತನನ್ನು ಮನೆಯಿಂದ ಹೊರಹಾಕಿದ್ದಾಳೆ. ತಾನು ನೀಡಿದ ಫೋನ್ ಅನ್ನು ಹಿಂದಿರುಗಿಸಲು ಹೇಳಿದಾಗ ಪ್ರಿಯಕರ ಕೊಡಲು ನಿರಾಕರಿಸಿ ಹಾಗೆಯೇ ಹೋಗಿದ್ದಾನೆ. ಈಕೆಯ ಕರೆಯನ್ನು ಸ್ವೀಕರಿಸದೆ ಬ್ಲಾಕ್ ಮಾಡುತ್ತಿದ್ದಾನಂತೆ. ತಾನು ಉಪಯೋಗಿಸಿದ ಕಾರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಹಂಟರ್ ದೂರಿದ್ದಾಳೆ.