ನಟ ವಿಜಯ್​ ಕಚೇರಿ ಬಳಿ ವ್ಯಕ್ತಿಯೊಬ್ಬರ ಶವ ಪತ್ತೆ: ತೀವ್ರ ಚರ್ಚೆ ಹುಟ್ಟು ಹಾಕಿದ ಸಾವಿಗೆ ಕಾರಣ ಬಹಿರಂಗ

Vijay
Published on

ಚೆನ್ನೈ: ಚೆನ್ನೈ ಹೊರವಲಯದ ಪನೈಯುರ್​ನಲ್ಲಿರುವ ಕಾಲಿವುಡ್​ ಸೂಪರ್​ ಸ್ಟಾರ್​ ನಟ ವಿಜಯ್​ ಅವರ ಕಚೇರಿಯ ಆವರಣದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಶುಕ್ರವಾರ ಮುಂಜಾನೆ ಪತ್ತೆಯಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೃತ ವ್ಯಕ್ತಿಯನ್ನು ಪ್ರಭಾಕರನ್​ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ವಿಜಯ್ ಮಕ್ಕಳ್ ಇಯಕ್ಕಂನ ಮುಖ್ಯ ಕಚೇರಿಯು ಇಸಿಆರ್ ರಸ್ತೆಯಲ್ಲಿರುವ ಪನೈಯೂರಿನಲ್ಲಿರುವ ಬಂಗಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತದೆ. ಕಟ್ಟಡವನ್ನು ಈಗ ನವೀಕರಿಸಲಾಗುತ್ತಿದ್ದು, ಹಳೆ ವಾಷರಮನ್‌ಪೇಟೆ ಮೂಲದ ಪ್ರಭಾಕರನ್ ಎಂಬ ಪೇಂಟರ್ ಒಂದು ತಿಂಗಳಿನಿಂದ ಗುತ್ತಿಗೆ ಆಧಾರದ ಮೇಲೆ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಯವರನ್ನು ಭೇಟಿ ಮಾಡಿ ಬುಧವಾರ ರಾತ್ರಿ ವಾಪಸಾಗಿದ್ದ ಪ್ರಭಾಕರನ್​, ಕುಡಿದ ಮತ್ತಿನಲ್ಲಿ ಪರೋಟ ಖರೀದಿಸಲು ಸೂಪರ್​ವೈಸರ್​ ಬಳಿ ನೂರು ರೂಪಾಯಿ ಕೇಳಿದ್ದರು ಎನ್ನಲಾಗಿದೆ.

ಮರುದಿನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಭಾಕರನ್ ಕೈಯಲ್ಲಿ ಮತ್ತು ಬಾಯಿಯಲ್ಲಿ ಪರೋಟ ಇರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಮದ್ಯದ ಅಮಲಿನಲ್ಲಿ ಗಟ್ಟಿಯಾದ ಆಹಾರವನ್ನು ತಿನ್ನಲು ಯತ್ನಿಸಿದಾಗ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ವಿಜಯ್ ಅವರು ಪ್ರಸ್ತುತ ವಂಶಿ ಪೈಡಿಪಲ್ಲಿ ನಿರ್ದೇಶನದ 'ತಲಪತಿ 66' ಚಿತ್ರೀಕರಣದಲ್ಲಿದ್ದು, ಥಮನ್ ಸಂಗೀತ ಸಂಯೋಜನೆ ಮತ್ತು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ವಿಜಯ್​ಗೆ ಮೊದಲ ಬಾರಿಗೆ ಜೋಡಿಯಾಗಿದ್ದು, ಪ್ರಭು, ಶರತ್‌ಕುಮಾರ್, ಜಯಸುಧಾ, ಶ್ರೀಕಾಂತ್, ಪ್ರಕಾಶ್ ರಾಜ್, ಶಾಮ್, ಖುಷ್ಬು, ಸಂಗೀತಾ ಕ್ರಿಶ್, ಸಂಯುಕ್ತಾ ಮತ್ತು ಯೋಗಿ ಬಾಬು ಮುಂತಾದವರ ತಾರಾಗಣವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net