ಅಮಾನವೀಯ ಕೃತ್ಯ: ಕಳ್ಳ ಅಂದುಕೊಂಡು ವ್ಯಕ್ತಿಯೊಬ್ಬನಿಗೆ ಥಳಿಸಿ, ಟ್ರಕ್​ಗೆ ಕಟ್ಟಿ ದರದರನೇ ಎಳೆಸಿ ಹತ್ಯೆ

truck
Published on

ಭೋಪಾಲ್​: ವ್ಯಕ್ತಿಯೊಬ್ಬನ್ನು ಕಳ್ಳ ಅಂದುಕೊಂಡ ಗುಂಪೊಂದು ಆತನನ್ನು ಬರ್ಬರವಾಗಿ ಥಳಿಸಿದಲ್ಲದೆ, ಲಾರಿ ಹಿಂಬದಿಗೆ ಕಟ್ಟಿ ದರದರನೇ ಎಳೆಸುವ ಮೂಲಕ ಆತನ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ನಾವು ಕಳ್ಳನೊಬ್ಬನನ್ನು ಹಿಡಿದಿದ್ದೇವೆ ಎಂದು ಕೆಲವು ಮಂದಿ ಪೊಲೀಸ್​ ಸಹಾಯವಾಣಿಗೆ ಕರೆ ಮಾಡುತ್ತಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪುತ್ತಾರೆ. ಬಳಿಕ ನಿತ್ರಾಣ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಆತನನ್ನು ನಿಮುಚ್​ ಜಿಲ್ಲಾಸ್ಪತ್ರಗೆ ಶಿಫಾರಸು ಮಾಡಲಾಗುತ್ತದೆ. ಆದರೆ, ಆತ ಸಾವಿಗೀಡಾಗಿರುವುದಾಗಿ ನಿಮುಚ್​ ಆಸ್ಪತ್ರೆಯ ವೈದ್ಯರು ಘೋಷಿಸುತ್ತಾರೆ.

ನಿಮುಚ್​ ಜಿಲ್ಲೆಯ ಜೆತಿಯಾ ಗ್ರಾಮದಲ್ಲಿ ಗುರುವಾದ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮೃತ ವ್ಯಕ್ತಿ ತನ್ನನ್ನು ಬಿಟ್ಟು ಬಿಡುವಂತೆ ಸಾಕಷ್ಟು ಗೋಗರೆದರೂ ಆ ಗುಂಪು ಆತನನ್ನು ಬಿಡದೆ ಚೆನ್ನಾಗಿ ಥಳಿಸಿದೆ. ಮೃತ ವ್ಯಕ್ತಿಯನ್ನು ಕನ್ಹಾ ಅಲಿಯಾಸ್​ ಕನ್ಹಿಯಾ ಭೀಲ್​ ಎಂದು ಗುರುತಿಸಲಾಗಿದೆ. ಈತ ಬಾನಾಡಾ ಗ್ರಾಮದ ನಿವಾಸಿ.

ಈ ಪ್ರಕರಣದಲ್ಲಿ 8 ಮಂದಿಯನ್ನು ಗುರುತಿಸಲಾಗಿದೆ. ಅದರಲ್ಲಿ ಐದು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ನೀಮುಚ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೂರಜ್​ ವರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ವೈರಲ್​ ವಿಡಿಯೋ ನೆರವಾಯಿತು ಎಂದಿದ್ದಾರೆ.

ಬಂಧಿತರ ಮೇಲೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ( ದೌರ್ಜನ್ಯ ತಡೆಯುವಿಕೆ) ಕಾಯ್ದೆ ಅಡಿಯಲ್ಲಿ ಕೊಲೆ ಪ್ರಕರಣ ಮತ್ತು ಭಾರತೀಯ ದಂಡಸಂಹಿತೆಯ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net