More

    ವಿದ್ಯಾರ್ಥಿಗಳಿಗೆ ಎನ್​ಇಪಿ ಸ್ವಾತಂತ್ರ್ಯ; ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ಮಾತು

    ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ವಮಟ್ಟದಲ್ಲಿ ಶಿಕ್ಷಣ ನೀಡುವ ಜತೆಗೆ ನಮ್ಮತನವನ್ನೂ ಉಳಿಸಿಕೊಳ್ಳುವ ಅವಕಾಶ ಹಾಗೂ ಸ್ವಾತಂತ್ರ್ಯವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒದಗಿಸುತ್ತದೆ… ಇದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಅಭಿಪ್ರಾಯ. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಜಯವಾಣಿ ಕ್ಲಬ್​ಹೌಸ್​ನಲ್ಲಿ ವಿಸõತವಾಗಿ ಮಾತನಾಡಿದ ಅವರು, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ…

    ವಿಶ್ವಮಾನವರಾಗುವ ಅವಕಾಶ

    ವಿಶ್ವಮಾನವರಾಗುವ ಜತೆಗೆ ನಮ್ಮತನವನ್ನು ಮರೆಯಬಾರದು ಎಂಬುದು ಎನ್​ಇಪಿ ಮೊದಲ ಉದ್ದೇಶ. ಉದ್ಯೋಗ ಕಂಡುಕೊಳ್ಳುವುದರ ಜತೆಗೆ ವ್ಯಕ್ತಿತ್ವ ರೂಪಿಸಬೇಕು. ಇದೆಲ್ಲ ಆಗಬೇಕೆಂದರೆ ಶಿಕ್ಷಣದ ಎಲ್ಲ ರಂಗಗಳಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಆಸಕ್ತಿಯನ್ನು ಗುರುತಿಸಿ ಅದನ್ನು ಬೆಳೆಸಬೇಕು ಎಂಬುದು ಶಿಕ್ಷಣದ ಉದ್ದೇಶ. ಅದನ್ನು ಎನ್​ಇಪಿ ಮತ್ತಷ್ಟು ಸದೃಢವಾಗಿಸುತ್ತದೆ. ಶಿಕ್ಷಣ ಪೂರೈಸಿದ ನಂತರ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ, ಕಂಪನಿಯ ಯೋಜನೆಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಅವರಿಗೆ ಇರಬೇಕು. ಜತೆಗೆ, ಸೋಲಿನಿಂದ ದುಃಖಿಗಳಾಗದೆ ಮುಂದೆ ನಡೆಯುವಂತಹ ಮಾನಸಿಕ ಸಾಮರ್ಥ ಹೊಂದಿರಬೇಕು. ಇವುಗಳ ಜತೆಗೆ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳು ನಮ್ಮಲ್ಲಿ ಇರಬೇಕು ಎಂಬುದು ಎನ್​ಇಪಿ ಕೇಂದ್ರ ವಿಚಾರಗಳು.

    2020ರಿಂದಲೇ ಸಿದ್ಧತೆ: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್​ಇಪಿ) 2020ರ ಜು.20ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 2020ರ ಡಿಸೆಂಬರ್​ನಿಂದಲೇ ಕರ್ನಾಟಕದಲ್ಲಿ ಇದರ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈಗಿನ ಶಿಕ್ಷಣದ ಮಿತಿ: ಈಗ ಶಿಕ್ಷಣದಲ್ಲಿ ಕಾಂಬಿನೇಷನ್ ಪಡೆದುಕೊಳ್ಳಬೇಕು. ಉದಾಹರಣೆಗೆ ವಿಜ್ಞಾನದಲ್ಲಿ ಪಿಸಿಎಂ, ಪಿಸಿಬಿ, ಇತ್ಯಾದಿ… ಈ ಕಾಂಬಿನೇಷನ್​ಗಳಲ್ಲಿ ಯಾವುದೋ ಒಂದು ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೂ ವಿದ್ಯಾರ್ಥಿ ಆರೂ ಸೆಮಿಸ್ಟರ್ ಓದಬೇಕು ಎಂಬುದು ಬಹುಕಷ್ಟ. ಅದೇ ರೀತಿ ಕಲೆ, ವಿಜ್ಞಾನ, ವಾಣಿಜ್ಯದ ಅಧ್ಯಾಪಕರಲ್ಲೂ ವಿಭಾಗಗಳು ಗಟ್ಟಿಯಾಗಿವೆ. ಯಾವುದೇ ಕಾರಣಕ್ಕೆ ವಿದ್ಯಾರ್ಥಿ ಶಿಕ್ಷಣವನ್ನು ನಡುವಿಗೆ ಸ್ಥಗಿತಗೊಳಿಸಿದರೆ ಯಾವ ಉಪಯೋಗವೂ ಇರುವುದಿಲ್ಲ.

    2 ಪ್ಲಸ್ 1 ಕಾಂಬಿನೇಷನ್: ಒಂದು ನಿಕಾಯದಲ್ಲಿ ಮೂರು ವಿಷಯಗಳಿ ರುತ್ತವೆ. ಅದರಲ್ಲಿ ಎರಡು ವಿಷಯವನ್ನು ಅದೇ ಕ್ಷೇತ್ರದಿಂದ ಆಯ್ಕೆ ಮಾಡಿಕೊಳ್ಳಬೇಕು. ಒಂದು ವಿಷಯ ಓಪನ್ ಎಲೆಕ್ಟಿವ್ ಇರುತ್ತದೆ. ಈ ವಿಷಯವನ್ನು ಅದೇ ಕ್ಷೇತ್ರದಿಂದಲೂ ಆಯ್ಕೆ ಮಾಡಿಕೊಳ್ಳಬಹುದು, ಅಥವಾ ವಿಜ್ಞಾನ, ವಾಣಿಜ್ಯದಿಂದಲೂ ಆಯ್ಕೆ ಮಾಡಿಕೊಳ್ಳಬಹುದು. ಸಂಗೀತ, ಯೋಗವನ್ನೂ ತೆಗೆದುಕೊಳ್ಳಬಹುದು.

    ವಿದ್ಯಾರ್ಥಿ ಏನು ಮಾಡಬೇಕು?: ವಿದ್ಯಾರ್ಥಿ ಮೊದಲು ಕಾಲೇಜು ಆಯ್ಕೆ ಮಾಡಿ ಕೊಳ್ಳಬೇಕು. ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬುದರ ಕುರಿತು ಅಲ್ಲಿನ ಸಿಬ್ಬಂದಿ ಮಾರ್ಗದರ್ಶನ ಮಾಡುತ್ತಾರೆ. ತನ್ನ ಆಸಕ್ತಿ ನೋಡಿಕೊಂಡು ವಿಷಯ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಲ್ಕು ಸೆಮಿಸ್ಟರ್​ನಲ್ಲಿ ಎರಡು ಭಾಷೆ ಆಯ್ಕೆ ಮಾಡಿಕೊಳ್ಳಬೇಕು, ಇದರಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಇನ್ನೊಂದು ಭಾಷೆಯನ್ನು ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳಬಹುದು.

    ವಿದ್ಯಾರ್ಥಿಗಳಿಗೆ ಎನ್​ಇಪಿ ಸ್ವಾತಂತ್ರ್ಯ; ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ಮಾತುಎನ್​ಇಪಿ ವೈಶಿಷ್ಟ್ಯಗಳು

    • ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ: ಪ್ರತಿ ವಿದ್ಯಾರ್ಥಿಯ ವಿಶಿಷ್ಟತೆಯನ್ನು ಗುರುತಿಸಿ, ಅದನ್ನು ಅನಾವರಣ ಮಾಡುವುದು
    • ತೆಳು ವಿಭಜನೆ: ಪ್ರಸ್ತುತ ಕಲೆ-ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಗಾಢವಾಗಿ ವಿಭಜನೆ ಆಗಿದೆ. ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡವರು ಮತ್ತೊಂದು ಕ್ಷೇತ್ರದತ್ತ ಯೋಚಿಸಲೂ ಆಗುತ್ತಿಲ್ಲ. ಈ ರೀತಿ ಇರಬಾರದು. ಶಿಕ್ಷಣ ಬಹುಶಿಸ್ತೀಯವಾಗಿರಬೇಕು. ಎನ್​ಇಪಿಯಲ್ಲಿ, ಕಲೆಯವರು ವಿಜ್ಞಾನ, ವಾಣಿಜ್ಯ ಓದಬಹುದು, ವಾಣಿಜ್ಯದವರು ವಿಜ್ಞಾನವನ್ನು, ಆಸಕ್ತಿಯಿದ್ದರೆ ಓದಬಹುದು.
    • ಸಮಗ್ರ ಶಿಕ್ಷಣ: ವಿದ್ಯಾರ್ಥಿಯಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಬೇಕು.
    • ಸಮಾನತೆ ಮತ್ತು ಒಳಗೊಳ್ಳುವಿಕೆ: ಸಮಾಜದ ಎಲ್ಲ ವರ್ಗದ, ಎಲ್ಲ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವುದು. ಸರ್ಕಾರಿ ಕಾಲೇಜುಗಳಲ್ಲಿ ಇದನ್ನು ಸಾಧಿಸಲು ಪ್ರಯತ್ನಿಸಲಾಗುತ್ತದೆ.

    ತಂತ್ರಜ್ಞಾನಕ್ಕೆ ಮಹತ್ವ

    ಎನ್​ಇಪಿ ಅನುಷ್ಠಾನದಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯೂನಿಫೈಡ್ ಯೂನಿವರ್ಸಿಟಿ ಆಂಡ್ ಕಾಲೇಜ್ ಮ್ಯಾನೇಜ್​ವೆುಂಟ್ ಸಿಸ್ಟಂ) ಮೂಲಕ 22 ವಿವಿಗಳ ದಾಖಲೆ, ಪರೀಕ್ಷೆ ಸೇರಿ ಅನೇಕ ಕಾರ್ಯಗಳನ್ನೂ ಒಂದೇ ವೇದಿಕೆಗೆ ತರಲಾಗುತ್ತಿದೆ. ಕ್ರೆಡಿಟ್ ಟ್ರಾನ್ಸ್​ಫರ್, ಒಂದು ಕಾಲೇಜು ಬಿಟ್ಟರೆ ಮತ್ತೊಂದಕ್ಕೆ ಸೇರ್ಪಡೆ ಆಗಲು ಅನುಕೂಲದಂತಹ ಅನೇಕ ವೈಶಿಷ್ಠ್ಯೆಗಳಿವೆ. ಡಿಜಿಟಲ್ ಕಲಿಕೆಯಲ್ಲಿ ಕರ್ನಾಟಕ ಲರ್ನಿಂಗ್ ಮ್ಯಾನೇಜ್​ವೆುಂಟ್ ಸಿಸ್ಟಂ (ಕರ್ನಾಟಕ ಎಎಲ್​ಎಂಎಸ್) ರೂಪಿಸಲಾಗಿದೆ. 5 ಲಕ್ಷ ವಿದ್ಯಾರ್ಥಿಗಳಿಗೆ ಇದರ ಉಪಯೋಗ ಸಿಗುತ್ತಿದೆ. ಪ್ರತಿ 1 ಗಂಟೆಯ ವಿಡಿಯೋ, ಒಂದು ಪಿಪಿಟಿ, ಸಾರಾಂಶ ಹಾಗೂ 10 ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆ ಇರುತ್ತದೆ. ಈಗ ಸರ್ಕಾರಿ ಕಾಲೇಜುಗಳ 9 ಸಾವಿರ ಕ್ಲಾಸ್​ರೂಮ್ಳಲ್ಲಿ ಎರಡೂವರೆ ಸಾವಿರ ಸ್ಮಾರ್ಟ್​ಕ್ಲಾಸ್ ರೂಂ ಮಾಡಲಾಗಿದೆ. ಕರೆಂಟ್ ಹೋದಾಗಲೂ ಇವು ಕೆಲಸ ಮಾಡುವಂತೆ ರೂಪಿಸಲಾಗಿದೆ. ಪಾಠವನ್ನು ಪರಿಣಾಮಕಾರಿಯಾಗಿಸಲು ಪಿಪಿಟಿ, ಅನಿಮೇಷನ್, ಚಿತ್ರಗಳನ್ನು ಬಳಸಬಹುದು. ಕರ್ನಾಟಕ ಎಎಲ್​ಎಂಎಸ್ ಬಳಸಲು 1.60 ಲಕ್ಷ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಟ್ಯಾಬ್ ನೀಡಲಾಗಿದೆ. ಈ ವರ್ಷ ಮೊದಲ ವರ್ಷಕ್ಕೆ ಸೇರುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಟ್ಯಾಬ್ ನೀಡಲಾಗುತ್ತದೆ.

    ಎನ್​ಇಪಿ ಬಗ್ಗೆ ಎಲ್ಲಿ ತಿಳಿದುಕೊಳ್ಳಬೇಕು?

    ಕಾಲೇಜು ಶಿಕ್ಷಣ ಇಲಾಖೆಯ ವೆಬ್​ಸೈಟ್​ನಲ್ಲಿ ಇದರ ಮಾಹಿತಿ ಪ್ರಕಟಿಸುತ್ತೇವೆ. ಅಲ್ಲದೆ, ಪ್ರತಿ ಕಾಲೇಜಿನಲ್ಲೂ ಸಹಾಯವಾಣಿ ಕೇಂದ್ರ ಆರಂಭಿಸಲಿದ್ದು, ಅದಕ್ಕೆ ಕರೆ ಮಾಡಿಯೂ ಮಾಹಿತಿ ಪಡೆದುಕೊಳ್ಳಬಹುದು.

    • ಮೈನರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಬಹುದೇ?

    -ಇಲ್ಲ. ಇದಕ್ಕೆ ಅವಕಾಶ ಇಲ್ಲ. ಮೇಜರ್ ವಿಷಯದಲ್ಲೇ ಪಿಜಿ ಮಾಡಬೇಕಿದೆ.

    • ಅರ್ಧಕ್ಕೆ ಪದವಿ ಮೊಟಕುಗೊಳಿಸಿದವರು ಮತ್ತೆ ಪೂರ್ಣಗೊಳಿಸಲು ಅವಕಾಶ ಇದೆಯಾ?

    -ಎನ್​ಇಪಿ 2021-22ನೇ ಸಾಲಿನಿಂದ ಜಾರಿಗೆ ಬರುತ್ತಿರುವುದರಿಂದ ಆನಂತರದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ.

    • ನಮಗೆ ಇಷ್ಟ ಬಂದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆಯಾ?

    -ಹೌದು. ಆದರೆ, ನೀವು ಪ್ರವೇಶ ಪಡೆಯುವ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್​ಗಳನ್ನು ಮಾತ್ರ ಕಾಲೇಜಿನವರು ನೀಡಲು ಸಾಧ್ಯ.

    • ಪದವಿಯಲ್ಲಿ ಹಾಲಿ ಇರುವಂತೆ ಮುಂದೆ ಕೂಡ ಹಲವು ಕೋರ್ಸ್​ಗಳು ಇರಲಿದೆಯಾ?

    -ಕೋರ್ಸ್​ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ವಿದ್ಯಾರ್ಥಿಗಳಿಗೆ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ದೊರೆಯಲಿದೆ.

    • ಗ್ರಾಮೀಣ ವಿದ್ಯಾರ್ಥಿಗಳಿಗೆ ಏನು ಅನುಕೂಲ?

    -ಕನ್ನಡದಲ್ಲೇ ಕೋರ್ಸ್ ಕಲಿಯಬಹುದು. ಅಲ್ಲದೆ, ಕೌಶಲ, ತಂತ್ರಜ್ಞಾನದ ಅರಿವು ಇದರಿಂದ ಪಡೆಯಬಹುದು.

    • ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗ್ರಂಥಾಲಯ ವ್ಯವಸ್ಥೆ ಸರಿಯಾಗಿ ಇಲ್ಲ. ನಮಗೂ ಎಐಸಿಟಿಇ ಶ್ರೇಣಿ ವೇತನ ನೀಡಬೇಕು.

    -ನೀತಿ ಅನುಷ್ಠಾನವಾಗುತ್ತಿದ್ದಂತೆಯೇ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಕೂಡ ಆಗಲಿದೆ. ಈ ಸಿಬ್ಬಂದಿ ಇಲ್ಲದೆ, ನೀತಿ ಅನುಷ್ಠಾನ ಕಷ್ಟ. ಗ್ರಂಥಾಲಯವನ್ನು ಸಹ ಉನ್ನತೀಕರಿಸಲಾಗುವುದು. ವೇತನದ ಹೆಚ್ಚಳದ ಬಗ್ಗೆ ಆಲೋಚಿಸಲಾಗುವುದು.

    • ಟ್ಯಾಬ್​ ನೀಡುವುದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್​ನೆಟ್ ಸೇವೆ ಕಲ್ಪಿಸಿ.

    -ಹಾಲಿ ನಮ್ಮಲ್ಲಿರುವ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಇಂಟರ್​ನೆಟ್ ಸೇವೆ ಲಭ್ಯವಿದೆ. ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದ ವೇಳೆ ಟ್ಯಾಬ್ ಮೂಲಕ ವೀಡಿಯೋಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

    • ಸೈಬರ್ ಸೆಕ್ಯೂರಿಟಿ ಮತ್ತು ಪ್ರವಾಸದ ಕೋರ್ಸ್​ಗಳ ಬಗ್ಗೆ ಮಾಹಿತಿ ನೀಡಿ.

    -ವಿದೇಶದ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಈ ಕೋರ್ಸ್ ಆರಂಭಿಸುತ್ತಿದ್ದೇವೆ. 60 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು. ಇದಕ್ಕೆ ಪ್ರತ್ಯೇಕ ಪ್ರವೇಶ ಪರೀಕ್ಷೆ ಮಾಡುತ್ತೇವೆ. ವಿದೇಶದಲ್ಲೂ ನೀವು ವ್ಯಾಸಂಗ ಮಾಡಬಹುದಾಗಿದೆ.

    • ಪತ್ರಿಕೋದ್ಯಮ ಕೋರ್ಸ್ ಆರಂಭಿಸಿ.

    -ಕೋರ್ಸ್ ಆರಂಭಕ್ಕೆ ಯಾವುದೇ ಅಭ್ಯಂತರ ಇಲ್ಲ. ವಿವಿಯ ವ್ಯಾಪ್ತಿಯಲ್ಲಿ ಕಾಲೇಜುಗಳು ಅಗತ್ಯ ಸೌಕರ್ಯ ಕಲ್ಪಿಸಿಕೊಂಡು ವಿವಿಯಿಂದ ಅನುಮತಿ ಪಡೆದು ಆರಂಭಿಸಬಹುದಾಗಿದೆ.

    ವಿದ್ಯಾರ್ಥಿಗಳಿಗೆ ಎನ್​ಇಪಿ ಸ್ವಾತಂತ್ರ್ಯ; ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ಮಾತುಮೂರು ಹಂತದ ವ್ಯವಸ್ಥೆ

    • ಪಠ್ಯ: ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಬೇಕು ಎಂಬುದು ಎನ್​ಇಪಿ ಉದ್ದೇಶ. ಒಂದು ಕೋರ್ಸ್​ನಲ್ಲಿ ಮೂರು ವಿಷಯದ ಜತೆಗೆ, ನಾಗರಿಕನಾಗಿ ಅವಶ್ಯಕ ಕೌಶಲ್ಯ ಹಾಗೂ ಸಾಮರ್ಥ್ಯವರ್ಧನೆ ಕೋರ್ಸ್​ಗಳನ್ನು ಸೇರಿಸಲಾಗುತ್ತಿದೆ. ಡಿಜಿಟಲ್ ಬಳಕೆ, ಹಣಕಾಸು ಸಾಕ್ಷರತೆ, ಕೃತಕ ಬುದ್ಧಿಮತ್ತೆ, ನೈತಿಕ ಮೌಲ್ಯಗಳು, ಸಾಂವಿಧಾನಿಕ ಮೌಲ್ಯಗಳು, ಆರೋಗ್ಯ ಮತ್ತು ಸ್ವಾಸ್ಥ್ಯ ಕುರಿತು ಕೋರ್ಸ್ ಇದರಲ್ಲಿ ಕೆಲವು ಉದಾಹರಣೆಗಳು. ಈ ವಿಷಯಗಳನ್ನು ಕಡ್ಡಾಯ ಮಾಡಲಾಗಿದೆ. ಬಹುಭಾಷಾ ಕೌಶಲ, ಸ್ಥಳೀಯ ಮಟ್ಟದಲ್ಲಿ ವೈವಿಧ್ಯತೆಗೆ ಗೌರವ ನೀಡುವುದನ್ನು ಮುಖ್ಯವಾಗಿಸಿಕೊಂಡು ಪ್ರತಿಯೊಂದು ವಿವಿಯೂ ಪಠ್ಯ ರಚನೆಗೆ ಸಂಪೂರ್ಣ ಸ್ವಾತಂತ್ರ್ಯ ಹೊಂದಿರುತ್ತದೆ. ಎನ್​ಇಪಿಯ ವಿಶೇಷತೆಯೆಂದರೆ ಮಲ್ಟಿ ಎಂಟ್ರಿ-ಮಲ್ಟಿ ಎಕ್ಸಿಟ್. ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಷನ್ಸ್ ಫ್ರೇಮ್ರ್ಕ್(ಎನ್​ಎಸ್​ಕ್ಯುಎಫ್) ಎಂಬುದು ವಿವಿಧೆಡೆ ಉದ್ಯೋಗಕ್ಕೆ ಪರಿಗಣಿಸಲಾಗುತ್ತಿರುವ ಶ್ರೇಣಿ. ಎನ್​ಇಪಿಯಲ್ಲಿ ಪ್ರತಿಯೊಂದು ಹಂತದಲ್ಲೂ ಪ್ರಮಾಣಪತ್ರ ನೀಡಲಾಗುತ್ತದೆ. ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಇದರ ಉದ್ದೇಶ. ಎನ್​ಎಸ್​ಕ್ಯುಎಫ್​ಗೆ ಅನುಗುಣವಾಗಿ ಪಠ್ಯವನ್ನು ರೂಪಿಸಲಾಗುತ್ತಿದೆ. ಸರ್ಕಾರದಿಂದ ಅಂಗೀಕೃತ ಆನ್​ಲೈನ್ ವ್ಯವಸ್ಥೆ ಮೂಲಕವೂ ಶೇ.30 ಕ್ರೆಡಿಟ್ ಪಡೆಯಲು ಅವಕಾಶ ನೀಡಲಾಗಿದೆ. ಉದಯವಾಗುತ್ತಿರುವ ಹೊಸ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಲು ಇದು ಅನುಕೂಲವಾಗುತ್ತದೆ.
    • ಬೋಧನಾ ಕ್ರಮ (ಪೆಡಗಾಜಿ): ಎನ್​ಇಪಿ ಕಲಿಕಾ ಪ್ರಕ್ರಿಯೆಯ ಹೃದಯಭಾಗವೇ ಅಧ್ಯಾಪಕರು. ಅಧ್ಯಾಪಕರೇ ಶಿಕ್ಷಣ ನೀತಿ ಪ್ರಕ್ರಿಯೆಯ ಕೇಂದ್ರಬಿಂದು. ವಿದ್ಯಾರ್ಥಿಯು ಕಲಿಕೆಕಾಗಿ ಕಲಿಯುವ ಬದಲಿಗೆ ಪೂರ್ಣ ಜ್ಞಾನ ಪಡೆಯಬೇಕು. ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದೆ. ಇದರ ಮೂಲಕ ಕಲಿಕೆಯ ವಿಧಾನವನ್ನು ಪರಿಣಾಮಕಾರಿಯಾಗಿಸಬಹುದು.
    • ಮೌಲ್ಯಮಾಪನ: ಮೌಲ್ಯಮಾಪನವನ್ನು ಸರಿಯಾಗಿ ಮಾಡುವುದು ಶಿಕ್ಷಣ ವ್ಯವಸ್ಥೆಗೆ ಮುಖ್ಯ. ಈಗ ಎರಡು ರೀತಿಯ ಮೌಲ್ಯಮಾಪನ ಇದೆ, ಫಾಮೇಟಿವ್ ಹಾಗೂ ಸಮೇಟಿವ್ ಅಸೆಸ್​ವೆುಂಟ್. ಈಗಿನ ಶಿಕ್ಷಣದಲ್ಲಿ ಸಮೇಟಿಕ್ ಅಸೆಸ್​ವೆುಂಟ್​ಗೆ ಮಹತ್ವ ನೀಡಲಾಗುತ್ತಿದೆ. ಸೆಮಿಸ್ಟರ್ ಅಂತ್ಯದಲ್ಲಿ ಒಂದು ಪರೀಕ್ಷೆ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ವಿಶ್ವಾದ್ಯಂತ ಫಾಮೇಟಿವ್ ಅಸೆಸ್​ವೆುಂಟ್​ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪ್ರತಿ ತರಗತಿ ನಂತರ, ಪ್ರತಿ ತಿಂಗಳು ವಿದ್ಯಾರ್ಥಿಯ ನಿರಂತರ ಮೌಲ್ಯಮಾಪನವನ್ನು ಮಾಡಲು ಮಹತ್ವ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts