ಸ್ವಗ್ರಾಮದಲ್ಲೇ ಶಾಸಕ ಎನ್​. ಮಹೇಶ್​ಗೆ ಯುವಕರ ತರಾಟೆ: ಮೊಳಗಿದ ಗೋಬ್ಯಾಕ್​ ಮಹೇಶ್​ ಘೋಷಣೆ

n mahesh
Published on

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್​.ಮಹೇಶ್​ ವಿರುದ್ಧ ಸ್ವಗ್ರಾಮದಲ್ಲೇ ಗೋಬ್ಯಾಕ್​ ಘೋಷಣೆ ಕೂಗಿದ ಪ್ರಸಂಗ ಇಂದು (ಸೆ.18) ಜರುಗಿದೆ.

ಶಾಸಕ ಮಹೇಶ್​ ಅವರು ಇಂದು ಸ್ವಗ್ರಾಮ ಶಂಕನಪುರಕ್ಕೆ ಆಗಮಿಸಿದ್ದರು. ಈ ಗ್ರಾಮ ಕೊಳ್ಳೇಗಾಲದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿದೆ. ಇತ್ತೀಚೆಗೆ ಶಾಸಕರ ನಡೆಯಿಂದ ಅಸಮಾಧಾನಗೊಂಡಿರುವ ಊರಿನ ಯುವಕರು, ಶಾಸಕರು ಊರಿಗೆ ಬಂದಾಗಲೇ ಅವರ ಎದುರೇ ಗೋಬ್ಯಾಕ್ ಮಹೇಶ್ ಎಂದು ಘೋಷಣೆ ಕೂಗಿದ್ದಾರೆ.

ಆಕ್ರೋಶಕ್ಕೆ ಕಾರಣ ಏನೆಂದರೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಎಂದು ಯುವಕರು ಆರೋಪ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಕರೆಸಿದ ಗ್ರಾಮಸ್ಥರು ಕಳಪೆ ಕಾಮಗಾರಿಯನ್ನು ಅನಾವರಣಗೊಳಿಸಿದ್ದಾರೆ.

ಇಂದು ಗ್ರಾಮಸ್ಥರೊಂದಿಗೆ ಸಭೆ ನಡೆಸಲು ಎನ್​. ಮಹೇಶ್​ ಆಗಮಿಸಿದ್ದರು. ಆದರೆ, ಸ್ವಗ್ರಾಮಕ್ಕೆ ಕೆಲಸ ಮಾಡುವಲ್ಲಿ ನೀವು ವಿಫಲರಾಗಿದ್ದೀರಿ. ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಗ್ರಾಮಕ್ಕೆ ಭೇಟಿ ಮಾಡಲು ಮತ್ತು ಗ್ರಾಮಸ್ಥರೊಂದಿಗೆ ಸಭೆ ನಡೆಸಲು ನೀವು ಅರ್ಹರಲ್ಲ ಎಂದು ಯುವಕರು ಕಿಡಿಕಾರಿ, ಘೋಷಣೆಯನ್ನು ಕೂಗಿದ್ದಾರೆ.

ಇತ್ತೀಚೆಗೆ ಮಾಂಬಳ್ಳಿ ಗ್ರಾಮದಲ್ಲಿ ಕೇವಲ ಒಂದೂವರೆ ಅಡಿ ನೀರಿದ್ದರು ಮಳೆ ಹಾನಿ ಪರಿಶೀಲನೆಗೆ ತೆಪ್ಪದಲ್ಲಿ ತೆರಳಿ ಶಾಸಕ ಮಹೇಶ್​ ಭಾರೀ ಟೀಕೆಗೆ ಗುರಿಯಾಗಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net