ಹಲ್ಲು ಉಜ್ಜದೇ ಮುತ್ತಿಡಬೇಡ ಎಂದ ಪತ್ನಿ: ಕೋಪಗೊಂಡ ಗಂಡನಿಂದ ನಡೆಯಿತು ಘನ ಘೋರ ಕೃತ್ಯ

Kerala Man
Published on

ಮನ್ನಾರ್​ಕಾಡ್​: ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿಯ ನಡುವೆ ನಡೆದ ಜಗಳವು ತಾರಕಕ್ಕೇರಿ ಗಂಡ, ಪತ್ನಿಯನ್ನು ಕೊಲೆ ಮಾಡಿರುವ ಆತಂಕಕಾರಿ ಘಟನೆ ಕೇರಳದ ಮನ್ನಾರ್​ಕಾಡ್​ನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಗಂಡ ಅವಿನಾಶ್​ನನ್ನು ಬಂಧಿಸಲಾಗಿದೆ. ಹಲ್ಲು ಉಜ್ಜದೇ ಮಗನಿಗೆ ಮುತ್ತು ಕೊಡಬೇಡಿ ಎಂದು ದೀಪಿಕಾ ಹೇಳಿದ ಮಾತಿಗೆ ಆಕೆಯೊಂದಿಗೆ ಅವಿನಾಶ್​ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ದೀಪಿಕಾ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಅವರ ಏಕೈಕ ಪುತ್ರ ಐವಿನ್ ಎದುರೇ ಕೊಲೆ ನಡೆದಿದೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಿಕಾ ಅವರನ್ನು ನೆರೆಹೊರೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನೆರೆ ಮನೆಯವರು ನೋಡಿದಾಗ ಆಕೆಯ ಮಗ ಐವಿನ್ ತಾಯಿಯ ಮೃತದೇಹವನ್ನು ಅಪ್ಪಿಕೊಂಡು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಆರೋಪಿ ಅವಿನಾಶ್​ ಮಚ್ಚು ಹಿಡಿದು ದೀಪಿಕಾ ಪಕ್ಕದಲ್ಲಿ ನಿಂತಿದ್ದನ್ನು ಸ್ಥಳೀಯರು ನೋಡಿದ್ದಾರೆ. ಘಟನೆಯ ಬಳಿಕ ತಕ್ಷಣ ದೀಪಿಕಾ ಅವರನ್ನು ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ದೀಪಿಕಾ ಅವರ ಕುತ್ತಿಗೆ, ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸ್ಥಳೀಯರು ಅವಿನಾಶ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net