

ಜೈಪುರ: ವಿಚ್ಛೇದನಕ್ಕಾಗಿ ಐಎಎಸ್ ಟಾಪರ್ಸ್ ದಂಪತಿ ಟೀನಾ ಡಾಬಿ ಮತ್ತು ಅಥರ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಜೈಪುರದ ಕೌಟುಂಬಿಕ ನ್ಯಾಯಾಲಯವು ಮಂಗಳವಾರ ಮಾನ್ಯ ಮಾಡಿದ್ದು, ದಂಪತಿಗೆ ವಿಚ್ಛೇದನ ನೀಡಿದೆ.
2015ರ ಬ್ಯಾಚ್ನ ಐಎಎಸ್ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್ ಖಾನ್ ಅವರು ಎರಡನೇ ರ್ಯಾಂಕ್ ಪಡೆದಿದ್ದರು. ತರಬೇತಿ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು 2018ರಲ್ಲಿ ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮದುವೆಯಾದ ಎರಡು ವರ್ಷಗಳ ಬಳಿಕ ಕಳೆದ ನವೆಂಬರ್ (2020) ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು.
ಇನ್ನು ಇಬ್ಬರ ಮದುವೆ ಬಹಳ ಅದ್ಧೂರಿಯಾಗಿ ನಡೆದಿತ್ತು. ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಆಶೀರ್ವದಿಸಿದ್ದರು. ಇವರಿಬ್ಬರ ಮದುವೆ ಭಾರೀ ಸುದ್ದಿ ಸಹ ಆಗಿತ್ತು.
ಟೀನಾ ಡಾಬಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಖಾನ್ ಎಂಬ ಸರ್ನೇಮ್ ತೆಗೆದು ಹಾಕಿದಾಗಿನಿಂದ ಇಬ್ಬರ ನಡುವಿನ ವಿವಾಹ ಸಂಬಂಧ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಅದೇ ಸಮಯದಲ್ಲಿ ಅಥರ್ ಸಹ ಇನ್ಸ್ಟಾಗ್ರಾಂನಲ್ಲಿ ಟೀನಾ ಅವರನ್ನು ಅನ್ಫಾಲೋ ಮಾಡಿದ್ದು, ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿ ನೀಡಿತ್ತು.
ಇನ್ನು ಟೀನಾ ಡಾಬಿ ಮತ್ತು ಅಥರ್ ಖಾನ್ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ದಂಪತಿಗೆ ಶುಭಕೋರಿದರೆ, ಹಿಂದು ಮಹಾಸಭಾ, ಐಎಎಸ್ ಅಧಿಕಾರಿಗಳಿಬ್ಬರ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿತ್ತು. (ಏಜೆನ್ಸೀಸ್)