More

    ಪಾವಗಡ ಟು ಬಿಗ್ ಬಾಸ್: ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕ್ಲಬ್​ಹೌಸ್​ ಸಂವಾದದಲ್ಲಿ ಮಂಜು…

    ಮಂಜು ಗೆಲ್ಲುತ್ತಾರೆ ಅಂತ ಬಹಳಷ್ಟು ಜನರಿಗೆ ಅನಿಸಿತ್ತು. ಆದರೆ, ದೊಡ್ಡ ಅಂತರದಲ್ಲಿ ಮತ್ತು ‘ಬಿಗ್ ಬಾಸ್’ ಕಾರ್ಯಕ್ರಮದ ಇತಿಹಾಸದಲ್ಲೇ ದಾಖಲೆಯ ಅಂತರದಿಂದ ಮಂಜು ಗೆದ್ದಿರುವುದು ವಿಶೇಷ. ಪಾವಗಡದ ಸಾಧಾರಣ ಕುಟುಂಬದಿಂದ ಬಂದ ಮಂಜು, ‘ಬಿಗ್ ಬಾಸ್’ ಸೀಸನ್ 8ರ ವಿಜೇತರಾಗಿ ಹೊರಹೊಮ್ಮುವುದರ ಹಿಂದೆ ಕಾಣದ ಸಾಕಷ್ಟು ಪರಿಶ್ರಮ ಇದೆ. ಹಸಿವು, ನೋವು, ಸಂಕಟ, ಕಷ್ಟ ಎಲ್ಲವೂ ಇದೆ. ಈ ರೋಚಕ ಪಯಣವನ್ನು ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ನ್ಯೂಸ್ ಕ್ಲಬ್​ಹೌಸ್ ಸಂವಾದಲ್ಲಿ ಅವರು ತೆರೆದಿಟ್ಟಿದ್ದಾರೆ.

    ಬಣ್ಣದ ಹುಚ್ಚು ಹಿಡಿಸಿದ ಪೆಟ್ರೋಲ್ ಬಂಕ್…

    2007ರಲ್ಲಿ ಪಾವಗಡದಿಂದ ಬೆಂಗಳೂರಿನ ಪೆಟ್ರೋಲ್ ಬಂಕ್​ಗೆ ಕೆಲಸಕ್ಕೆ ಸೇರಿದೆ. ಆ ಬಂಕ್​ಗೆ ಅಂಬರೀಷ್ ಸರ್, ಸುದೀಪ್ ಅಣ್ಣ ಸೇರಿ ಸಾಕಷ್ಟು ಕಲಾವಿದರು ಪೆಟ್ರೋಲ್ ಹಾಕಿಸಲು ಬರುತ್ತಿದ್ದರು. ಹಾಗೆ ಯಾರಾದರೂ ಸೆಲೆಬ್ರಿಟಿಗಳು ಬಂದರೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದೇ ನಮಗೆ ಹಬ್ಬ. ಕಲಾವಿದರಿಗೆ ಇಷ್ಟೊಂದು ಗೌರವ ಸಿಗುವಾಗ ನಾನೂ ಯಾಕೆ ಕಲಾವಿದ ಅಗಬಾರದು ಎಂದನಿಸಿತು. ಅಂದಿನಿಂದಲೇ ಬಣ್ಣ ಅಭಿನಯ ಶಾಲೆಯಲ್ಲಿ ನನ್ನ ನಟನಾ ತರಬೇತಿ ಶುರುವಾಯಿತು. ಈಗಾಗಲೇ ಮಂಜು ಎನ್ನುವವರು ಸಾಕಷ್ಟು ಜನ ಇದ್ದಾರೆ ಎಂಬ ಕಾರಣಕ್ಕೆ ನನ್ನೂರು ಪಾವಗಡ ಸೇರಿಸಿಕೊಂಡೆ. ಕೈಯಲ್ಲಿರುವ ಕೆಲಸ ಬಿಟ್ಟು, ನೀನಾಸಂಗೆ ಸೇರಿಕೊಂಡೆ. ಹಲವು ರಂಗತಂಡಗಳ ಜತೆಗೆ ಮಂಗಳೂರು, ಉಡುಪಿ, ಗದಗ, ಮೈಸೂರು ಹೀಗೆ ರಾಜ್ಯದ ನಾನಾ ಭಾಗಗಳಿಗೆ ಹೋಗಿ ನಾಟಕಗಳಲ್ಲಿ ನಟಿಸಿದೆ.

    ಶೋ ರದ್ದಾದಾಗ ಆಕಾಶ ಕಳಚಿ ಬಿದ್ದಂತಾಗಿತ್ತು…

    ‘ಬಿಗ್​ಬಾಸ್​ನ ಬಹು ದೊಡ್ಡ ಅಭಿಮಾನಿ ನಾನು. ಈ ಸಲ ಯಾರೆಲ್ಲ ಭಾಗವಹಿಸುತ್ತಾರೆ ಎಂದು ಪ್ರತಿ ಸೀಸನ್​ನ ಬಗ್ಗೆ ಕುತೂಹಲದಿಂದ ಇರುತ್ತಿದ್ದೆ. ಹೀಗಿರುವಾಗಲೇ ನನಗೂ ಕರೆ ಬಂತು. ನನ್ನನ್ನು ಕರೀತಾರೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಶೋ ಶುರುವಾಯ್ತು. 72 ದಿನದಂದು, ಈ ಸಲದ ‘ಬಿಗ್ ಬಾಸ್’ ಇಲ್ಲಿಗೇ ಮೊಟಕುಗೊಳ್ಳಲಿದೆ ಎಂಬ ಸಂದೇಶವನ್ನು ‘ಬಿಗ್ ಬಾಸ್’ ನೀಡಿದರು. ಅಲ್ಲಿಗೆ ನಾನು ಕಂಡಿದ್ದ ಕನಸೆಲ್ಲ ಒಮ್ಮೆಲೇ ನೆಲಕ್ಕಪ್ಪಳಿಸಿದವು. ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತ್ತು. ಹೊರಗೆ ಬಂದು ನೋಡಿದಾಗ ಕರೊನಾ ಕರಾಳತೆ ಇತ್ತು. ನನ್ನ ಸ್ನೇಹಿತರೂ ತೀರಿ ಹೋಗಿದ್ದರು. ಆ ನೋವು ನೋಡಿ ಭಗವಂತ ಮತ್ತೊಂದು ಅವಕಾಶ ನೀಡಿದ. ಮತ್ತೆ ‘ಬಿಗ್ ಬಾಸ್’ ಸೆಕೆಂಡ್ ಇನ್ನಿಂಗ್ಸ್ ಶುರುವಾಯಿತು. ತುಂಬ ಸೈಲೆಂಟ್ ಆದೆ. ಆತ್ಮವಿಶ್ವಾಸದಿಂದ ಮನರಂಜನೆ ನೀಡಲು ಮುಂದಾದೆ. ಕೊನೆಯವರೆಗೂ ಅದನ್ನೇ ಮಾಡಿದೆ.

    ಬೈಗುಳಕ್ಕೆ ಭಯಬಿದ್ದಿದ್ದೆ …

    ರಂಗಭೂಮಿಯಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿದ ಬಳಿಕ ಧಾರಾವಾಹಿಗಳ ಮೂಲಕ ವೃತ್ತಿ ಆರಂಭಿಸಿದರಾಯಿತು ಎಂದುಕೊಂಡೆ. ಹೀಗಿರುವಾಗ 2013ರಲ್ಲೊಮ್ಮೆ ಧಾರಾವಾಹಿಯ ಶೂಟಿಂಗ್ ನೋಡಲು ಹೋಗಿದ್ದೆ. ನಟನೆಯಲ್ಲಿ ಕೊಂಚ ತಡವರಿಸಿದ್ದಕ್ಕೆ ಹುಡುಗಿಯೊಬ್ಬಳಿಗೆ ನಿರ್ದೇಶಕರು ಬಯ್ಯುತ್ತಿದ್ದರು. ಆ ಬೈಗುಳ ನೋಡಿ, ಏನೇ ಆಗಲಿ ಎಲ್ಲವೂ ಪರಿಪೂರ್ಣವಾದ ಮೇಲಷ್ಟೇ ಈ ಟಿವಿ ಕ್ಷೇತ್ರಕ್ಕೆ ಕಾಲಿಡಬೇಕೆಂದು ನಿರ್ಧರಿಸಿದೆ. ಮತ್ತೆ ಮೂರು ನಾಲ್ಕು ವರ್ಷ ಪರಿಪೂರ್ಣನಾಗುವುದರಲ್ಲಿಯೇ ಗಮನ ಹರಿಸಿದೆ. ಹೀಗಿರುವಾಗ ಕಲರ್ಸ್ ಕನ್ನಡದ ಶೋಗೆ ಆಡಿಷನ್ ಕೊಟ್ಟು ಫೇಲಾದೆ. ಟಿವಿಯಲ್ಲಿ ಗುರುತಿಸಿಕೊಳ್ಳಲು ಆಗ್ತಿಲ್ಲವಲ್ಲ ಎಂದು ಬೇಸರವಾಯ್ತು. ಕೆಲ ತಿಂಗಳ ಬಳಿಕ ಮತ್ತೆ ಆಡಿಷನ್ ಬಂತು. ಬಬ್ರುವಾಹನ ಸ್ಕ್ರಿಪ್ಟ್ ರೆಡಿ ಮಾಡಿ ತೋರಿಸಿದಾಗ ನಮ್ಮ ತಂಡದ ಇಬ್ಬರನ್ನು ಆಯ್ಕೆ ಮಾಡಿಕೊಂಡರು. ಬಳಿಕ ಪ್ರೊಡಕ್ಷನ್ ಬದಲಾವಣೆ ಆಯಿತು. ಆದರೆ ನನ್ನ ಧ್ವನಿ ಮತ್ತು ಬಾಡಿ ಲಾಂಗ್ವೇಜ್ ಸರಿಯಿಲ್ಲ ಎಂದು ವಾಪಸ್ ಕಳುಹಿಸಿದರು. ಪುನಃ ಮೂರು ವಾರ ಬಿಟ್ಟು ಮರಳಿ ಕರೆದಾಗ ಹೋಗಿ ಅಲ್ಲಿ ಕೆಲವರ ಸಲಹೆ ಪಡೆದು ಅಭಿನಯ ಮಾಡಿದರೂ, ಚೆನ್ನಾಗಿ ಮೂಡಿಬರಲಿಲ್ಲ. ಕೊನೆಗೆ 28 ನಿಮಿಷದ ಸ್ಕಿಟ್ ಮಾಡಿ ಗೆದ್ದೆವು. ಅಲ್ಲಿಂದ ಮತ್ಯಾವತ್ತೂ ಹಿಂತಿರುಗಿ ನೋಡಲಿಲ್ಲ.

    ಪಾವಗಡ ಟು ಬಿಗ್ ಬಾಸ್: ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕ್ಲಬ್​ಹೌಸ್​ ಸಂವಾದದಲ್ಲಿ ಮಂಜು...ಬಿಗ್ ಬಾಸ್ ನನಗೆ ಕೊಟ್ಟಿದ್ದಿಷ್ಟು

    ನನ್ನ ಜೀವನದಲ್ಲಿ ಈ ಗೆಲುವು ತುಂಬ ಮುಖ್ಯ. ಹುಚ್ಚು ಕಲಾವಿದನಾಗಿ ಮನೆ ಪ್ರವೇಶ ಮಾಡಿದವನು ನಾನು. ಜೀವನದ ಪಾಠಗಳನ್ನು ಪಡೆದು ತಂದಿದ್ದೇನೆ. ಯಾವ ಸಮಯಕ್ಕೆ ಏನು ಮಾತನಾಡಬೇಕು, ಹೇಗೆಲ್ಲ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಬಿಗ್ ಬಾಸ್​ನಲ್ಲಿ ಕಲಿತಿದ್ದೇನೆ. ಸ್ನೇಹ, ಪ್ರೀತಿ ಸಿಕ್ಕಿದೆ. ಜೀವನ ಮತ್ತು ‘ಬಿಗ್ ಬಾಸ್’ಗೂ ತುಂಬ ವ್ಯತ್ಯಾಸವೇನಿಲ್ಲ. ಎರಡರಿಂದಲೂ ಹೊಸಹೊಸ ಪಾಠ ಕಲಿತಿದ್ದೇನೆ.

    ನನ್ನೂರಿನ ನಾಟಕ, ಅರವಿಂದ್ ಸ್ಫೂರ್ತಿ

    ನಮ್ಮದು ಗಡಿಭಾಗದ ತಾಲೂಕಾಗಿರುವುದರಿಂದ ತೆಲುಗು ಪ್ರಭಾವ ಜಾಸ್ತಿ. ಹೀಗಿರುವಾಗ ನನ್ನೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಾಟಕಗಳು ನಡೆಯುತ್ತಿದ್ದವು. ಅದರಲ್ಲೂ ಪೌರಾಣಿಕ ನಾಟಕಗಳೆಂದರೆ ಇಷ್ಟ. ನಮ್ಮ ಸ್ನೇಹ ಬಳಗದಲ್ಲಿಯೂ ಹಾಸ್ಯಪ್ರಜ್ಞೆ ಇರುವವರ ಸಂಖ್ಯೆಗೇನು ಕಡಿಮೆ ಇಲ್ಲ. ಅಲ್ಲಿಂದಲೇ ನನಗೆ ಸ್ಪೂರ್ತಿ ಸಿಕ್ಕಿದೆ. ‘ಬಿಗ್ ಬಾಸ್’ ಮನೆಯೊಳಗೆ ಹೋದಾಗ ಅರವಿಂದ್​ನಿಂದ ಹೆಚ್ಚು ಇನ್ಸ್​ಪಿರೇಷನ್ ಪಡೆದಿದ್ದೇನೆ. ಗೆಲುವಿನ ಕಡೆಗಿನ ಆತನ ತುಡಿತ ನನ್ನನ್ನು ಹುರಿದುಂಬಿಸುತ್ತಿತ್ತು. ನನ್ನ ಈ ಜರ್ನಿಯಲ್ಲಿ ಆತನಿಂದಲೂ ಸಾಕಷ್ಟು ಕಲಿತಿದ್ದೇನೆ.

    ದಿವ್ಯಾ ಸುರೇಶ್ ಜತೆ ಮದ್ವೆ?

    ದಿವ್ಯಾ ನನ್ನ ಬೆಸ್ಟ್ ಫ್ರೆಂಡ್. ನಮ್ಮಿಬ್ಬರ ಸಂಬಂಧಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅವರೊಂದಿಗೆ ನಾನು ಒಳ್ಳೆಯ ಸ್ನೇಹಿತನಾಗಿ ಇರಲು ಇಷ್ಟಪಡುತ್ತೇನೆ. ನಾನು ಹಳ್ಳಿಯಿಂದ ಬಂದಿರೋನು. ಹಳ್ಳಿ ಹುಡುಗಿಯನ್ನೇ ಮದುವೆ ಆಗುತ್ತೇನೆ. ಈಗಾಗಲೇ ಮನೆಯಲ್ಲಿ ಹುಡುಗಿ ನೋಡುವ ಕೆಲಸ ಶುರುವಾಗಿದೆ. ಮದುವೆ ಬಗ್ಗೆ ನನಗೂ ನೂರಾರು ಕನಸುಗಳಿವೆ.

    ಪಾವಗಡ ಟು ಬಿಗ್ ಬಾಸ್: ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕ್ಲಬ್​ಹೌಸ್​ ಸಂವಾದದಲ್ಲಿ ಮಂಜು...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts