

ಇಂದೋರ್: ಟಿಕ್ಟಾಕ್ನಂತಹ ವಿಡಿಯೋ ಕ್ರೇಜ್ ಹುಟ್ಟಿಕೊಂಡಾಗಿನಿಂದ ಯುವಕರಿಂದಿಡಿದು ವಯಸ್ಸಾದ ವ್ಯಕ್ತಿಯವರೆಗೂ ಎಲ್ಲರೂ ಸ್ವಯಂ ವಿಡಿಯೋ ಮಾಡುವ ಗೀಳಿಗೆ ಬಿದ್ದಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳ ಭರಾಟೆ ಭಾರೀ ಜೋರಾಗಿದೆ. ಆದರೆ, ಕೆಲವೊಮ್ಮೆ ಅತಿರೇಕದ ವಿಡಿಯೋಗಳು ನಮ್ಮ ಕಣ್ಣ ಮುಂದೆ ಬಂದು ಹೋಗಿವೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಯುವತಿಯೊಬ್ಬಳು ಟ್ರಾಫಿಕ್ ಸಿಗ್ನಲ್ನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ಕೇಳಿಬರುತ್ತಿದೆ. ಇಂದೋರ್ನ ವಾಹನನಿಬಿಡ ರಸ್ತೆ ರಾಸೊಮಾ ಸ್ಕ್ವೇರ್ನ ಟ್ರಾಫಿಕ್ ಸಿಗ್ನಲ್ ಬಳಿ ಯುವತಿ ಸೊಂಟ ಬಳುಕಿಸಿದ್ದಾಳೆ.
ರಸ್ತೆಯ ಮಧ್ಯೆ ಯುವತಿ ಡ್ಯಾನ್ಸ್ ಮಾಡುವುದನ್ನು ನೋಡಿದ ಸವಾರರು ಇದು ಪೊಲೀಸ್ ಇಲಾಖೆಯ ಅಭಿಯಾನ ಇರಬಹುದು ಎಂದು ತಪ್ಪಾಗಿ ಅರ್ಥೈಸಿಕೊಂಡರು. 30 ಸೆಕೆಂಡ್ ವಿಡಿಯೋದಲ್ಲಿ ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ಝೀಬ್ರಾ ಕ್ರಾಸಿಂಗ್ ಬಳಿ ಬರುವ ಯುವತಿ ಶ್ರೇಯಾ ಕಾರ್ಲಾ ಗ್ರೀನ್ ಸಿಗ್ನಲ್ ಬೀಳುವವರೆಗೂ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದಾಳೆ. ಆಕೆ ಮಾಡೆಲ್ ಎಂದು ತಿಳಿದುಬಂದಿದೆ. ಇನ್ನು ವಿಡಿಯೋದಲ್ಲಿ ಸರಿಯಾಗಿ ಮಾಸ್ಕ್ ಧರಿಸುವಂತಲೂ ಯುವತಿ ಮನವಿ ಮಾಡಿದ್ದಾಳೆ.
ವಿಡಿಯೋ ನೋಡಿರುವ ಪೊಲೀಸ್ ಅಧಿಕಾರಿಗಳು ಯುವತಿಯ ನಡೆಯಿಂದ ಅಸಮಾಧಾನಗೊಂಡಿದ್ದು ಇದು ಸಂಚಾರಿ ನಿಯಮ ಉಲ್ಲಂಘನೆ ಎಂದು ನೋಟಿಸ್ ಕಳುಹಿಸಿದ್ದಾರೆ. ಈ ರೀತಿಯಾಗಿ ವರ್ತಿಸಬೇಡಿ ಎಂದು ಸಂಚಾರ ವಿಭಾಗ ಕೂಡ ಯುವ ಜನಾಂಗದಲ್ಲಿ ಮನವಿ ಮಾಡಿಕೊಂಡಿದೆ. ನಿಮ್ಮ ಮನರಂಜನೆ ಬೇರೆಯವರಿಗೆ ಹಾನಿ ಉಂಟು ಮಾಡಬಹುದು ಎಂದಿದೆ.
ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ ಶ್ರೇಯಾ, ನಾನು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದಿದ್ದಾಳೆ. ವಿಡಿಯೋ ಹಿಂದೆ ರೆಡ್ ಸಿಗ್ನಲ್ ಬಿದ್ದಾಗ ವಾಹನಗಳನ್ನು ನಿಲ್ಲಿಸಬೇಕು ಮತ್ತು ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿದೆಯೋ ಹೊರತು ಬೇರೇನೂ ಇಲ್ಲ. ನನ್ನ ಹಾಗೇ ಮಾಡುವಂತೆ ನಾನು ಯಾರಿಗೂ ಪ್ರಭಾವ ಬೀರಿಲ್ಲ ಎಂದು ಸಮಜಾಯಿಷಿ ನೀಡಿದ್ದಾಳೆ. (ಏಜೆನ್ಸೀಸ್)