ತನ್ನದೇ ಚಾನೆಲ್​ನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿ ಸಾವಿನ ಹಾದಿ ಹಿಡಿದ ಯೂಟ್ಯೂಬರ್​!

Youtube
Published on

ಹೈದರಾಬಾದ್​: ಎಷ್ಟೇ ವಿಡಿಯೋ ಪೋಸ್ಟ್​ ಮಾಡಿದರೂ ವ್ಯೂವ್ಸ್​ ಬರುತ್ತಿಲ್ಲ ಅಂತ ಮನನೊಂದು ಯೂಟ್ಯೂಬರ್​ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ದೀನಾ (24) ಮೃತ ಯೂಟ್ಯೂಬರ್​. ಈತ ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದ. ಸೆಲ್ಫ್​ಪ್ಲೋ ಹೆಸರಿನಲ್ಲಿ ಗೇಮಿಂಗ್​ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದ. ಆದರೆ, ವ್ಯೂವ್ಸ್​ ಬರುತ್ತಿಲ್ಲ ಅಂತ ಮನನೊಂದು ಐದು ಅಂತಸ್ತಿನ ಅಪಾರ್ಟ್​ಮೆಂಟ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಹೈದರಾಬಾದ್​ನ ಸೈದಾಬಾದ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕ್ರಾಂತಿ ನಗರ ಕಾಲನಿಯಲ್ಲಿ ಗುರುವಾರ ನಡೆದಿದೆ. ಐಐಟಿ ಗ್ವಾಲಿಯರ್​ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದ. ಲೈವ್​​ ಗೇಮ್​ಗೆ ಸಂಬಂಧಿಸಿದ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದ. ಎಷ್ಟೇ ಪ್ರಯತ್ನ ಮಾಡಿದರೂ ವೀಕ್ಷಕರು ಹೆಚ್ಚಾಗುತ್ತಿಲ್ಲವಲ್ಲ ಎಂದು ಬೇಸರಗೊಂಡಿದ್ದ. ಅಲ್ಲದೆ, ಯೂಟ್ಯೂಬ್​ನಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದ.

ಇದಾದ ಸ್ವಲ್ಪದ ಸಮಯದ ನಂತರ ಕಟ್ಟಡದಿಂದ ಜಿಗಿದು ದೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಸೈದಾಬಾದ್​ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದ ಮರಣೋತ್ತರ ಪರೀಕ್ಷೆಗೆ ಒಸ್ಮಾನಿಯ ಶವಾಗಾರಕ್ಕೆ ರವಾನಿಸಿದ್ದಾರೆ.

ಘಟನಾ ಸ್ಥಳದಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಸದ್ಯ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net