

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದ್ದಾರೆ. ಇದೀಗ ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ಜಾವಲಿನ್ ಥ್ರೋ ಮಾಡುವ ಮೂಲಕ ಅಮೆರಿಕದ ಒರೆಗಾನ್ ರಾಜ್ಯದ ಯುಜಿನ್ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ನ ಪುರುಷರ ಜಾವಲಿನ್ ಥ್ರೋ ಫೈನಲ್‌ಗೆ ನೀರಜ್ ಅರ್ಹತೆ ಪಡೆದಿದ್ದಾರೆ.
ನೀರಜ್ ಅವರು ಅರ್ಹತಾ ಸುತ್ತಿನ ಎ ಗುಂಪಿನಲ್ಲಿದ್ದರು. ತಮ್ಮ ಮೊದಲ ಎಸೆತದಲ್ಲೇ 88.39 ಮೀಟರ್ ಥ್ರೋನೊಂದಿಗೆ ಯಶಸ್ಸು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿರುವ ನೀರಜ್, ಭಾನುವಾರ ಬೆಳಗ್ಗೆ ನಡೆಯಲಿರುವ ಮಹತ್ವದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ, ಭಾರತಕ್ಕೆ ಚಿನ್ನದ ಪದಕ ಬರುವ ನಿರೀಕ್ಷೆಯು ಇದೆ.
ವಿಶ್ವ ಚಾಂಪಿಯನ್ಸ್ ಫೈನಲ್‌ಗೆ ಅರ್ಹತೆ ಪಡೆಯಲು 83.50 ಮೀಟರ್ ಅನ್ನು ಅರ್ಹತಾ ಗುರುತನ್ನಾಗಿ ನಿಗದಿ ಮಾಡಲಾಗಿದೆ. ಆದರೆ, ನೀರಜ್ 88.39 ಮೀಟರ್ ಎಸೆಯುವ ಮೂಲಕ ಮೊದಲ ಯತ್ನದಲ್ಲೇ ಯಶಸ್ಸು ಸಾಧಿಸಿದರು. ಗ್ರೆನಾಡದ ಅಂಡರ್ಸನ್ ಪೀಟರ್ಸ್ 89.91 ಮೀಟರ್ ಎಸೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದರು ಮತ್ತು ಫೈನಲ್‌ಗೆ ಲಗ್ಗೆ ಇಟ್ಟರು.
ಭಾರತದ ರೋಹಿತ್ ಯಾದವ್ 80.42 ಮೀಟರ್ ಎಸೆತದೊಂದಿಗೆ ಅರ್ಹತಾ ಸುತ್ತಿನಲ್ಲಿ 10 ನೇ ಸ್ಥಾನ ಗಳಿಸಿ ಫೈನಲ್‌ಗೆ ಅರ್ಹತೆ ಪಡೆದರು.
24 ವರ್ಷ ವಯಸ್ಸಿನ ನೀರಜ್, 2021ರ ಆಗಸ್ಟ್ 7ರಂದು ಟೋಕಿಯೋ ಒಲಿಂಪಿಕ್ಸ್ನಲ್ಲಿ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ. 2021ರ ಮಾರ್ಚ್ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್ ಅನ್ನು 88.07 ಮೀಟರ್ ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಕಳೆದ ಜೂನ್ 15ರಂದು ಫಿನ್‌ಲ್ಯಾಂಡ್‌ನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ನೀರಜ್, 2ನೇ ಅವಕಾಶದಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಮುಟ್ಟಿಸಿದರು. ಆ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದರು. ಇದಾದ ಬಳಿಕ ಜೂನ್ 30ರಂದು ಸ್ಟಾಕ್ಹೋಮ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ 89.94 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಕೇವಲ 6 ಸೆಂಟಿ ಮೀಟರ್ ಅಂತರದೊಂದಿಗೆ 90 ಮೀಟರ್ ಸಾಧನೆಯಿಂದ ನೀರಜ್ ಹಿಂದುಳಿದಿದ್ದಾರೆ. ಇಂದಿಗೂ 89.94 ಮೀಟರ್ ಎಸೆತವೇ ನೀರಜ್ ಅವರ ಬೆಸ್ಟ್ ಥ್ರೋ ಆಗಿ ಉಳಿದುಕೊಂಡಿದೆ. (ಏಜೆನ್ಸೀಸ್)