ಯೂಟ್ಯೂಬ್​ ವಿಡಿಯೋ ನೋಡಿ ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಗಳಿಕೆ: ಒಂದೇ ಒಂದು ಕಾಮೆಂಟ್, ಸಿಕ್ಕಿಬಿದ್ದ ಅಣ್ಣ-ತಂಗಿ

Youtube Money
Published on

ಹೈದರಾಬಾದ್​: ಮನೆಯಲ್ಲೇ ಕುಳಿತು ಯೂಟ್ಯೂಬ್​ ವೀಕ್ಷಿಸಿ, ನಕಲಿ ನೋಟುಗಳನ್ನು ಮುದ್ರಿಸಿ, ಚಲಾಯಿಸುತ್ತಿದ್ದ ಮಹಾರಾಷ್ಟ್ರ​ ಮೂಲದ ಅಣ್ಣ-ತಂಗಿಯ ನಕಲಿ ನೋಟಿನ ಜಾಲವನ್ನು ಹೈದರಾಬಾದ್​ ಪೊಲೀಸರು ಮಂಗಳವಾರ (ಸೆ.20) ಭೇದಿಸಿದ್ದಾರೆ.

ಈ ಪ್ರಕರಣದ ಕುರಿತು ಉತ್ತರ ವಲಯದ ಡಿಸಿಪಿ ಚಂದನಾ ದೀಪ್ತಿ ಅವರು ಸಿಕಂದರಬಾದ್​ನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ವಿವರಿಸಿದರು.

ಆರೋಪಿಯನ್ನು ಕಸ್ತೂತಿ ರಮೇಶ್​ ಬಾಬು (35) ಮತ್ತು ಸಹೋದರಿ ರಾಮೇಶ್ವರಿ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಪುಣೆ ಮೂಲದ ರಮೇಶ್​ ಬಾಬು, ವಿದ್ಯಾವಂತನಾಗಿದ್ದು, ಕೆಲವು ವರ್ಷಗಳ ಹಿಂದೆ ಹೈದರಾಬಾದ್​ನ ಬಂಡ್ಲಗುಡ ಜಾಗೀರ್ ಕಾಳಿ ಮಂದಿರದ ಬಳಿಯಿರುವ ಶೆಡ್​ ಒಂದರಲ್ಲಿ ಮೆಕಾನಿಕ್​ ಆಗಿ ಕೆಲಸ ಮಾಡುತ್ತಿದ್ದ. ಅದೇ ಏರಿಯಾದ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದು, ಮದುವೆ ಆಗಿ ಜೀವನ ನಡೆಸುತ್ತಿದ್ದ. ರಮೇಶ್​ ಬಾಬು ತಂಗಿ ಕೆ. ರಾಮೇಶ್ವರಿ ಹೈದರಾಬಾದ್​ನಲ್ಲಿರುವ ಕಾಲೇಜ್​ ಒಂದರಲ್ಲಿ ಮೆಡಿಕಲ್​ ಕೋರ್ಸ್​ ಓದುತ್ತಿದ್ದಳು.

ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ರಮೇಶ್​ ಬಾಬು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದ. ಇದರ ನಡುವೆ ಆತನ ಕಣ್ಣಿಗೆ ಕಂಡಿದ್ದು, ನಕಲಿ ನೋಟುಗಳನ್ನು ಪ್ರಿಂಟ್​ ಮಾಡುವ ಯೂಟ್ಯೂಬ್​ ವಿಡಿಯೋ. ಬಳಿಕ ನಕಲಿ ನೋಟುಗಳನ್ನು ಪ್ರಿಂಟ್​ ಮಾಡಲು ಆರಂಭಿಸಿ, ಅವುಗಳನ್ನು ಏಜೆಂಟ್​ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದ. ಅಣ್ಣ-ತಂಗಿ ಇಬ್ಬರು ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದು, ನಕಲಿ ನೋಟು ಪ್ರಿಂಟ್​ ಮಾಡಲು ಬೇಕಾದ ಹೊಸ ಪ್ರಿಂಟರ್ಸ್​, ಕೆಮಿಕಲ್ಸ್​ ಮತ್ತು ಇತರೆ ಪದಾರ್ಥಗಳನ್ನು ಕೊಂಡು ತಂದಿದ್ದಾರೆ.

ಶೆಡ್​ನಲ್ಲಿ ವಾಸಿಸುತ್ತಿದ್ದ ಆರೋಪಿಗಳು ನಂತರ ಕಾಳಿಮಂದಿರ ಬಳಿ ಇರುವ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಒಂದನ್ನು ಬಾಡಿಗೆ ಪಡೆದಿದ್ದರು. ಆರೋಪಿಗಳು 100, 200 ಮತ್ತು 500 ರೂ. ನೋಟುಗಳನ್ನು ಮುದ್ರಿಸಿ, ಅವುಗಳನ್ನು ದೆಹಲಿ, ಗುಜರಾತ್​, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಂತಾದ ಕಡೆ ಚಲಾವಣೆ ಮಾಡುತ್ತಿದ್ದರು.

ರಮೇಶ್​ ಬಾಬು ಸಿಕ್ಕಿಬಿದ್ದಿದ್ದು ಹೇಗೆ?

ರಾಮಂತಪುರ ನಿವಾಸಿ ಸತ್ಲ ಅಂಜಯ್ಯ (38) ನಾಚಾರಂನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ನಕಲಿ ನೋಟು ತಯಾರಿಕೆಯ ವಿಡಿಯೋ ನೋಡಿದ ಅಂಜಯ್ಯ ಅವರು ವಿಡಿಯೋಗೆ ಕಾಮೆಂಟ್ ಬರೆದು ಆರ್ಥಿಕ ಸಂಕಷ್ಟದಿಂದ ಹೊರಬರಲು ತನಗೆ ಸಹಾಯ ಮಾಡುವಂತೆ ಕೋರಿದ್ದರು. ಇದನ್ನು ನೋಡಿ ರಮೇಶ್​ ಬಾಬು ಅಂಜಯ್ಯಗೆ ಕರೆ ಮಾಡಿ, ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ರಮೇಶ್ ಇತ್ತೀಚೆಗೆ ಟಿಎಸ್‌ಪಿಎ ಜಂಕ್ಷನ್‌ನಲ್ಲಿ ಅಂಜಯ್ಯ ಎಂಬುವವರಿಂದ 50,000 ರೂ. ಅಧಿಕೃತ ನಗದು ಪಡೆದು 1.30 ಲಕ್ಷ ರೂ. ನಕಲಿ ಹಣ ನೀಡಿದ್ದರು. ಹಣ ವಿನಿಮಯ ಮಾಡಿಕೊಂಡ ಬಳಿಕ ಸೆ.19ರಂದು ಹಣ್ಣಿನ ವ್ಯಾಪಾರಿ ಗೋಪಿ ರಾಮಸ್ವಾಮಿ ಬಳಿ ಹೋದ ಅಂಜಯ್ಯ, ಹಣ್ಣನ್ನು ಖರೀದಿಸಿ 200 ರೂಪಾಯಿ ಹಣ ನೀಡಿದ್ದಾನೆ. ಆದರೆ, ಅದು ನಕಲಿ ಹಣ ಎಂಬುದು ರಾಮಸ್ವಾಮಿಗೆ ಗೊತ್ತಾಗಿ ಪ್ರಶ್ನೆ ಮಾಡಿದಾಗ ಅಂಜಯ್ಯ ಪರಾರಿಯಾಗಲು ಯತ್ನಿಸಿದ್ದಾನೆ. ಬೆನ್ನಟ್ಟಿ ಹೋಗಿ ಹಿಡಿದ ರಾಮಸ್ವಾಮಿ, ಅಂಜಯ್ಯನನ್ನು ಗೋಪಾಲಪುರಂ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ರಮೇಶ್​ ಬಾಬು ಮತ್ತು ಅಂಜಯ್ಯನನ್ನು ಬಂಧಿಸಿ, ಅವರ ಬಳಿಯಿದ್ದ 2,500 ನೋಟುಗಳು, ಪ್ರಿಂಟರ್ಸ್​, ಎರಡು ಮೊಬೈಲ್​ ಫೋನ್​, ಒಂದು ಕಾರು ಮತ್ತು 2.50 ಲಕ್ಷ ಮೌಲ್ಯದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಸ್ತುತ ಪರಾರಿಯಾಗಿರುವ ರಾಮೇಶ್ವರಿ ಸಿಕ್ಕಿ ಬಿದ್ದರೆ, ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಡಿಸಿಪಿ ಚಂದನಾ ದೀಪ್ತಿ ತಿಳಿಸಿದ್ದಾರೆ. 6 ತಿಂಗಳಲ್ಲಿ 60 ರಿಂದ 70 ಲಕ್ಷ ರೂ. ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net