ಆಮ್ಲೆಟ್ ಮಾಡಿಕೊಡದಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಫ್ಯಾನಿಗೆ ನೇತುಹಾಕಿದ ಪತಿ

Omlette
Published on

ಪಟನಾ: ಆಮ್ಲೆಟ್ ಮಾಡಿಕೊಡಲು ಒಪ್ಪದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಆಕೆಯ ಮೃತದೇಹವನ್ನು ಸೀಲಿಂಗ್​ ಫ್ಯಾನ್​ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಕೊನೆಗೆ ಪತಿರಾಯ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಅಜಿತ್​ ಸಿಂಗ್​ ಎಂದು ಗುರುತಿಸಲಾಗಿದೆ. ಈತ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ರಾಮ್​ ವಿನಯ್​ ಸಿಂಗ್​ ಪುತ್ರ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ತಂದೆ ರಾಮ್​ ವಿನಯ್​ ನೀಡಿದ ಹೇಳಿಕೆ ಆಧಾರದ ಮೇಲೆ ಅಜಿತ್​ ಸಿಂಗ್​ ವಿರುದ್ಧ ಸೀತಾಮರ್ಹಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಈ ಘಟನೆ ಜಿಲ್ಲೆಯ ಬೆಲ್ಹಿ ಜೈರಾಮ್​ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿರುವ ರಾಮ್​ ವಿನಯ್​ ಸಿಂಗ್, ನನ್ನ ಮಗ ಮದ್ಯ ವ್ಯಸನಿ. ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದ. ಬರುವಾಗ ಜತೆಯಲ್ಲಿ ಮೊಟ್ಟೆಗಳನ್ನು ತಂದಿದ್ದ. ಆಮ್ಲೆಟ್​ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್​ (30) ಕೇಳಿದ. ಆದರೆ, ಆಕೆ ತಿರಸ್ಕರಿಸಿದಳು. ಗುರುವಾರ ಮೊಟ್ಟೆ ಮಾಡುವಂತಿಲ್ಲ ಎಂದು ಹೇಳಿದಳು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಯಿತು. ಗಂಡನ ಮದ್ಯ ವ್ಯಸನದಿಂದ ನೀತು ಬೇಸತ್ತು ಹೋಗಿದ್ದಳು. ಈ ಹಿಂದೆಯು ಆತನ ಚಟದ ವಿರುದ್ಧ ಆಕೆ ಪ್ರತಿಭಟಿಸಿದ್ದಳು. ಗುರುವಾರವೂ ಅದನ್ನೇ ಮಾಡಿದಳು. ಇದರಿಂದ ಕೋಪಗೊಂಡ ಅಜಿತ್​ ಮೊದಲು ಆಕೆಯನ್ನು ಬೆಡ್​ರೂಮ್​ನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿದ. ಇದಾದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಸೀಲಿಂಗ್​ ಫ್ಯಾನ್​ಗೆ ನೇತು ಹಾಕಿದ್ದಾನೆ. ಕೆಲವೇ ಸಮಯದಲ್ಲಿ ನೀತು ಕಿರುಚಾಡುವುದು ನಿಂತು ಹೊಗಿದ್ದರಿಂದ ಇಬ್ಬರು ಸಮಾಧಾನಗೊಂಡಿರಬಹುದೆಂದು ಭಾವಿಸಿದೆವು. ಆದರೆ, ಕೆಲವೇ ಕ್ಷಣದಲ್ಲಿ ಅಜಿತ್​ ಮನೆಯಿಂದ ಆಚೆ ಬಂದು ಓಡಿ ಹೋದನು. ಇದಾದ ಬಳಿಕ ಕೋಣೆ ಒಳಗೆ ನೋಡಿದಾಗ ನೀತು ಮೃತದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅದನ್ನು ನೋಡಿ ನಮಗೆ ಆಘಾತವಾಯಿತು ಎಂದು ರಾಮ್​ ವಿನಯ್​ ಸಿಂಗ್ ಹೇಳಿದ್ದಾರೆ.

ಎಫ್​ಐಆರ್​ ನಲ್ಲಿ ವಿನಯ್​ ಸಿಂಗ್​ ಹೇಳಿಕೆಯನ್ನು ದಾಖಲಿಸಲಾಗಿದೆ. ಠಾಣಾಧಿಕಾರಿ ಎಚ್​.ಎಸ್​. ಕುಮಾರ್​ ಎಂಬುವರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net