

ನವದೆಹಲಿ: ಯುದ್ಧ ಪೀಡಿತ ಯೂಕ್ರೇನ್ನಿಂದ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬಂದ ಸರ್ಕಾರಕ್ಕೆ ಕಾಶ್ಮೀರ ಮೂಲದ ಸಂಜಯ್ ಪಂಡಿತ ಎಂಬುವರು ಧನ್ಯವಾದ ತಿಳಿಸಿದ್ದಾರೆ. ಯೂಕ್ರೇನ್ನಿಂದ ಮರಳಿದ್ದು ನನ್ನ ಮಗನಲ್ಲ ಪ್ರಧಾನಿ ಮೋದಿ ಅವರ ಮಗನೆಂದು ಹೇಳಲು ಬಯಸುತ್ತೇನೆಂದು ಸಂಜಯ್ ಇದೇ ಸಂದರ್ಭದಲ್ಲಿ ಭಾವುಕ ಮಾತುಗಳನ್ನಾಡಿದರು.
ಯೂಕ್ರೇನ್‌ನ ಸುಮಿಯ ಸ್ಥಿತಿಯನ್ನು ನೋಡಿ ನಾವು ಭರವಸೆ ಕಳೆದುಕೊಂಡಿದ್ದೆವು. ಇಂತಹ ಸಂದಿಗ್ಧ ಸಮಯದಲ್ಲಿ ನನ್ನ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆತಂದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಸಂಜಯ್ ಪಂಡಿತ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಗನನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ಹೇಳಿದರು.
ನಿನ್ನೆ ಬೆಳಗ್ಗೆ ಯೂಕ್ರೇನ್ನಿಂದ ಬಂದ ತಮ್ಮ ಮಕ್ಕಳನ್ನು ಬರಮಾಡಿಕೊಳ್ಳಲು ಪಾಲಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 5 ರಿಂದ 6 ಗಂಟೆಗಳ ಕಾದು ಕುಳಿತಿದ್ದರು. ಮಕ್ಕಳು ಬರುತ್ತಿದ್ದಂತೆ ಅವರ ಮುಖಗಳನ್ನು ನೋಡಿ ಪಾಲಕರ ಮುಖದಲ್ಲಿ ನಗು ಅರಳಿತು. ಈ ಸಂದರ್ಭದಲ್ಲಿ ಸಂಜಯ್ ಪಂಡಿತ ಅವರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈಶಾನ್ಯ ಯೂಕ್ರೇನ್‌ನ ಯುದ್ಧ ಪೀಡಿತ ನಗರವಾದ ಸುಮಿಯಿಂದ ಹೆಚ್ಚಾಗಿ ವಿದ್ಯಾರ್ಥಿಗಳನ್ನೇ ಒಳಗೊಂಡ 674 ಜನರನ್ನು ಹೊತ್ತ ಮೂರು ವಿಮಾನಗಳು ಶುಕ್ರವಾರ ದೆಹಲಿಗೆ ಬಂದಿಳಿಯಿತು. ಬಂದವರು ಯೂಕ್ರೇನ್ನಲ್ಲಿ ತಾವು ಅನುಭವಿಸಿದ ಭಯಾನಕತೆಯನ್ನು ವಿವರಿಸಿದರು. ಬಂದವರು ಭಾರತ ಹಾಗೂ ಪ್ರಧಾನಿ ಪರ ಘೋಷಣೆಯನ್ನು ಕೂಗಿದರು. (ಏಜೆನ್ಸೀಸ್)