

ಫ್ಲೊರಿಡಾ: ಮಹಾಮಾರಿ ಕರೊನಾ ಹಿನ್ನೆಲೆಯಲ್ಲಿ ವಿಮಾನ ಮತ್ತು ಟ್ರೈನ್ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೋವಿಡ್ ನೆಗಿಟಿವ್ ರಿಪೋರ್ಟ್ ಮತ್ತು ಬೋರ್ಡಿಂಗ್ ಪಾಸ್ ತೋರಿಸಿದರೆ ಮಾತ್ರ ಪ್ರಯಾಣಿಕರನ್ನು ವಿಮಾನದೊಳಗೆ ಬಿಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಎಲ್ಲರು ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರಾ ಎಂದು ಪ್ರತಿನಿತ್ಯ ವಿಮಾನದಲ್ಲಿ ತಪಾಸಣೆ ಕೂಡ ನಡೆಸಲಾಗುತ್ತಿದೆ. ಹೀಗಿರುವಾಗ ಪ್ರಯಾಣಿಕನೊಬ್ಬ ಮಹಿಳೆಯರ ಒಳಉಡುಪನ್ನು ಮಾಸ್ಕ್ ರೀತಿ ಧರಿಸಿ ವಿಮಾನವೇರಿ ಅಲ್ಲಿನ ಸಿಬ್ಬಂದಿಗೆ ಮತ್ತು ಸಹಪ್ರಯಾಣಿಕರಿಗೆ ಶಾಕ್ ನೀಡಿದ್ದಾರೆ.
ಒಳಉಡುಪಿನ ಮಾಸ್ಕ್ ಧರಿಸಿದ್ದ ಪ್ರಯಾಣಿಕನನ್ನು ಆ್ಯಡಂ ಜಾನೆ (38) ಎಂದು ಗುರುತಿಸಲಾಗಿದೆ. ಈತ ಯುಎಸ್ಎನ ಫ್ಲೊರಿಡಾದಲ್ಲಿರುವ ಫೋರ್ಟ್ ಲೌಡರ್ಡೇಬಲ್ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಮಾಸ್ಕ್ ಧರಿಸಿ ವಿಮಾನವೇರಿದ್ದ. ಈ ರೀತಿಯ ಮಾಸ್ಕ್ ಏಕೆ ಧರಿಸಿದ್ದೀರಿ ಎಂದು ಸಿಬ್ಬಂದಿ ಪ್ರಶ್ನಿಸಿದಾಗ ಆತ ನೀಡಿದ ಉತ್ತರ ಕೇಳಿ ಸಿಬ್ಬಂದಿ ಆಘಾತಕ್ಕೆ ಒಳಗಾಗಿದ್ದಾರೆ.
ವಿಮಾನದ ಒಳಗೆ ತಿನ್ನಲು ಮತ್ತು ಕುಡಿಯಲು ಮಾಸ್ಕ್ ತೆಗೆಯಲು ಅನುಮತಿ ನೀಡುವಾಗ ಪ್ರಯಾಣದ ಉದ್ದಕ್ಕೂ ವಿಮಾನದ ಒಳಗೆ ಮಾಸ್ಕ್ ಧರಿಸುವಂತೆ ಒತ್ತಾಯ ಮಾಡುವುದು ಅಸಂಬದ್ಧ. ಆ ಅಂಸಬದ್ಧತೆಯನ್ನು ಪ್ರದರ್ಶಿಸಲು ಈ ರೀತಿ ಮಾಡಿದೆ. ಅಸಂಬದ್ಧತೆಯ ಬಗ್ಗೆ ತಿಳಿಹೇಳಲು ಅಸಂಬದ್ಧತೆಯೇ ಸರಿಯಾದ ದಾರಿ. ಹೀಗಾಗಿ ನಾನು ಈ ಮಾಸ್ಕ್ ಧರಿಸಿ ಬಂದೆ ಎಂದು ಆ್ಯಡಂ ಜಾನೆ ಹೇಳಿದ್ದಾರೆ.
ವಿಮಾನದ ಒಳಗೆ ನಡೆದ ಪ್ರಸಂಗವನ್ನು ಮತ್ತೊಬ್ಬ ಸಹ ಪ್ರಯಾಣಿಕ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಒಳಉಡುಪಿನ ಮಾಸ್ಕ್ ಧರಿಸಿ ವಿಮಾನ ಸೀಟಿನಲ್ಲಿ ಆ್ಯಡಂ ಜಾನೆ ಕುಳಿತುಕೊಳ್ಳವ ದೃಶ್ಯವಿದೆ. ಬಳಿಕ ಅದನ್ನು ವಿಮಾನದ ಸಿಬ್ಬಂದಿ ಪ್ರಶ್ನಿಸುತ್ತಾರೆ ಮತ್ತು ಆತನನ್ನು ಬಲವಂತದಿಂದ ವಿಮಾನದಿಂದ ಕಳಗೆ ಇಳಿಸುತ್ತಾರೆ. ಅಲ್ಲದೆ, ಆತನನ್ನು ವಿಮಾನ ನಿಲ್ದಾಣದಿಂದಲೇ ಬ್ಯಾನ್ ಮಾಡಿದ್ದಾರೆ.
ಈ ಹಿಂದಿನ ವಿಮಾನಗಳಲ್ಲೂ ಜಾನೆ ಇದೇ ರೀತಿ ಮಾಡಿದ್ದಾನಂತೆ. ಇದೊಂದು ಮಾಸ್ಕ್, ಇದು ತನ್ನ ಕೆಲಸವನ್ನು ಸರಿಯಾಗಿಯೇ ಮಾಡುತ್ತದೆ ಎಂದಿದ್ದನಂತೆ. ಪ್ರತಿ ವಿಮಾನದಲ್ಲೂ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದರು. ಕೆಲವರು ನನ್ನನ್ನು ವಿರೋಧಿಸಿದರೆ, ಇನ್ನು ಕೆಲವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಜಾನೆ ಹೇಳಿಕೊಂಡಿದ್ದಾರೆ. ಸದ್ಯ ಆತನ ಟಿಕೆಟ್ ದರವನ್ನು ಏರ್ಲೈನ್ಸ್ ಕಂಪನಿ ಮರುಪಾವತಿ ಮಾಡಿದ್ದು, ಮತ್ತೊಂದು ವಿಮಾನದ ಮೂಲಕ ತಾನು ತೆರಳಬೇಕಿದ್ದ ಪ್ರದೇಶವನ್ನು ತಲುಪಿದ್ದಾರೆ. (ಏಜೆನ್ಸೀಸ್)