ಮಾಜಿ ಪತ್ನಿಯ ನಡೆಯಿಂದ ಬೇಸತ್ತು 27 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಮಾಜಿ ಗಂಡ..!

Gujrat Woman
Published on

ಅಹಮದಾಬಾದ್​: ವಿಚ್ಛೇದನ ನೀಡಿ ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಮಾಜಿ ಪತಿರಾಯನೊಬ್ಬ ಸುಮಾರು 27 ಬಾರಿ ಚಾಕುವಿನಿಂದ ಇರಿದು ಮಾಜಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

ಅಜಯ್​ ಕುಮಾರ್​ ಮತ್ತು ಹೇಮಾ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿ ಕೆಲವು ವರ್ಷಗಳವರೆಗೆ ಅನೋನ್ಯವಾಗಿದ್ದರು. ಎರಡು ಮಕ್ಕಳಾದ ಮೇಲೆ ಹೇಮಾಗೆ ಗಂಡನ ವರ್ತನೆ ಬೇಸರ ತರಿಸಿತು. ಬಳಿಕ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದಳು. ಇಬ್ಬರ ನಡುವೆ ಆಗಾಗ ಜಗಳವೂ ನಡೆಯಿತಿತ್ತು.

ಇದರ ನಡುವೆ ಹೇಮಾಗೆ ಮಹೇಶ್​ ಠಾಕೂರ್​ ಎಂಬ ಯುವಕನ ಪರಿಚಯವಾಗಿ, ಸ್ನೇಹ ಬೆಳೆದಿದೆ. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರು ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ. ಹೀಗಾಗಿ ಹೇಮಾ ತನ್ನ ಪತಿ ಅಜಯ್​ ಠಾಕೂರ್​ಗೆ ವಿಚ್ಛೇದನ ನೀಡಿದಳು. ಅಲ್ಲದೆ, ಇಬ್ಬರು ಮಕ್ಕಳನ್ನು ಗಂಡನ ಸುಪರ್ದಿಗೆ ಬಿಟ್ಟ, ಮಹೇಶ್​ ಠಾಕೂರ್​ನನ್ನು ಮದುವೆಯಾದಳು.

ಆದಾಗ್ಯೂ, ಪತ್ನಿ ಬಿಟ್ಟು ಹೋದ ದಿನದಿಂದ ಅಜಯ್​ ಠಾಕೂರ್​ ಖಿನ್ನತೆಯಿಂದ ಬಳಲುತ್ತಿದ್ದನು. ಮಕ್ಕಳನ್ನು ಬಿಟ್ಟು ಹೋಗಿದ್ದರಿಂದ ಅಜಯ್​ ಮದ್ಯಕ್ಕೆ ದಾಸನಾಗಿದ್ದ. ಇಂತಹ ಸ್ಥಿತಿಗೆ ತಂದು ನಿಲ್ಲಿಸಿ ತಾನು ಮಾತ್ರ ಆರಾಮಾಗಿದ್ದಾಳೆ ಎಂದು ಅಜಯ್​ ದುಃಖಿಸುತ್ತಿದ್ದ. ಪ್ರತಿಬಾರಿ ಆಕೆಯ ನೆನಪಾದಾಗಲೆಲ್ಲ ಹೇಮಾ ಮೇಲೆ ಕೋಪ ಉಕ್ಕಿ ಹರಿಯುತ್ತಿತ್ತು. ಅಂತಿಮವಾಗಿ ಆಕೆಯನ್ನು ಕೊಲೆ ಮಾಡುವ ನಿರ್ಧಾರಕ್ಕೆ ಅಜಯ್​ ಬಂದ. ತನ್ನ ಕಾರ್ಯಸಾಧನೆಗೆ ಸ್ನೇಹಿತರ ಸಹಾಯವನ್ನು ಕೋರಿದ.

ಬುಧವಾರ ರಾತ್ರಿ ಅಜಯ್​, ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಹೇಮಾ ಮತ್ತು ಮಹೇಶ್​ ನೆಲೆಸಿದ್ದ ಮನೆಗೆ ತೆರಳಿದರು. ಈ ವೇಳೆ ಮಹೇಶ್​ ಮನೆಯಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಅಜಯ್​, ಹೇಮಾ ಮೇಲೆ ದಾಳಿ ಮಾಡಿದ್ದಾನೆ. ಹೇಮಾ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅಜಯ್​ ಸ್ನೇಹಿತರು ಆಕೆ ತಪ್ಪಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಕೊನೆಗೆ ಅಜಯ್​, ಹೇಮಾಗೆ 27 ಬಾರಿ ಇರಿದಿದ್ದಾನೆ. ಹೇಮಾ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಘಟನೆಯ ಬಳಿಕ ಆರೋಪಿಗಳು ಎಸ್ಕೇಪ್​ ಆಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net