ಬೇಕಿದ್ರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ: ಹಿಜಾಬ್​ ವಿವಾದದ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಭುವನ ಸುಂದರಿ!

Harnaz
Published on

ಮುಂಬೈ: ಹಿಜಾಬ್​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ 2021ರ ಭುವನ ಸುಂದರಿ ಪ್ರಶಸ್ತಿ ವಿಜೇತೆ ಹರ್ನಾಜ್​ ಸಂಧು, ಅವರವರ ಆಯ್ಕೆಗೆ ತಕ್ಕಂತೆ ಬದುಕಲು ಬಿಡಿ. ಯಾವುದ್ಯಾವುದೋ ವಿಚಾರಗಳಿಗೆ ಹೆಣ್ಣು ಮಕ್ಕಳ ಮೇಲೆ ಟಾರ್ಗೆಟ್​ ಮಾಡಬೇಡಿ ಎಂದು ಸಮಾಜವನ್ನು ಮನವಿ ಮಾಡಿಕೊಂಡಿದ್ದಾರೆ.

ಶಿಕ್ಷಣ ಸಂಸ್ಥೆಗಳ ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠ ಇತ್ತೀಚೆಗೆ ವಜಾಗೊಳಿಸಿದ್ದು, ಶಿರಸ್ತ್ರಾಣ ಅಥವಾ ಹಿಜಾಬ್​ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ಹೇಳಿದೆ. ಆದರೆ, ಹೈಕೋರ್ಟ್​ ಆದೇಶವನ್ನು ಒಪ್ಪದ ಅರ್ಜಿದಾರರು ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಈ ವಿವಾದ ಇನ್ನೂ ಜೀವಂತ ಇದೆ.

ಮಾರ್ಚ್​ 17ರಂದು ಹರ್ನಾಜ್​ ಸಂಧು ಅವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಹಿಜಾಬ್​ ವಿವಾದದ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಹರ್ನಾಜ್​ ಉತ್ತರಿಸಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹರ್ನಾಜ್​ ಪ್ರಶ್ನೆಗೆ ಪ್ರತಿಕ್ರಿಯಿಸುವ ಮೊದಲು, ಕಾರ್ಯಕ್ರಮದ ಸಂಘಟಕರು ಮಧ್ಯಪ್ರವೇಶಿಸಿ ವರದಿಗಾರರಿಗೆ ಯಾವುದೇ ರಾಜಕೀಯ ಪ್ರಶ್ನೆಗಳನ್ನು ಕೇಳದಂತೆ ಕೇಳಿಕೊಂಡರು ಮತ್ತು ಮಾಧ್ಯಮಗಳಿಗೆ ಆಕೆಯ ಜೀವನ ಪಯಣ, ಯಶಸ್ಸು ಮತ್ತು ಅವರು ಹೇಗೆ ಸ್ಫೂರ್ತಿಯ ಮೂಲವಾಗಿದ್ದಾರೆ ಎಂದು ಕೇಳಲು ಸಲಹೆ ನೀಡಿದರು. ಆದರೂ ಹಿಜಾಬ್​ ವಿಚಾರದಲ್ಲಿ ಏನಾದರೂ ಹೇಳಲಿ ಬಿಡಿ ಎಂದು ಪತ್ರಕರ್ತರು ಕೇಳಿದರು.

ಇದಾದ ಬಳಿಕ ಚಂಡೀಗಢ ಮೂಲದ ಮಾಡೆಲ್ ಹರ್ನಾಜ್,​ ಹಿಜಾಬ್​ ಕುರಿತಾದ ಪ್ರಶ್ನೆಗೆ ಉತ್ತರಿಸಿ, ಸಮಾಜದಲ್ಲಿ ಹುಡುಗಿಯರು ಎಷ್ಟು ಬಾರಿ ಗುರಿಯಾಗುತ್ತಾರೆ ಎಂದು ತನ್ನ ಕಳವಳವನ್ನು ವ್ಯಕ್ತಪಡಿಸಿದರು. ನೀವು ಯಾವಾಗಲೂ ಹುಡುಗಿಯರನ್ನು ಏಕೆ ಟಾರ್ಗೆಟ್ ಮಾಡುತ್ತೀರಿ? ಈಗಂತೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಅಂದಹಾಗೆ, ಹಿಜಾಬ್ ವಿಷಯದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರು (ಹುಡುಗಿಯರು) ಅವರು ಆಯ್ಕೆಮಾಡಿದ ರೀತಿಯಲ್ಲಿ ಬದುಕಲಿ, ಅವಳು ತನ್ನ ಗಮ್ಯಸ್ಥಾನವನ್ನು ತಲುಪಲಿ, ಅವಳು ಹಾರಲು ಬಿಡಿ, ಅದು ಅವಳ ರೆಕ್ಕೆಗಳು, ಅವುಗಳನ್ನು ಕತ್ತರಿಸಬೇಡಿ, ನೀವು ಅಗತ್ಯವಿದ್ದರೆ ನಿಮ್ಮದೇ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತನ್ನ ಪ್ರಯಾಣ, ತಾನು ಎದುರಿಸಿದ ಅಡೆತಡೆಗಳು ಮತ್ತು ಈ ವರ್ಷದ ಆರಂಭದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿನ ತನ್ನ ಯಶಸ್ಸಿನ ಬಗ್ಗೆ ಕೇಳುವಂತೆ ಹರ್ನಾಜ್​ ವರದಿಗಾರನನ್ನು ಕೇಳಿದರು.

ಇತ್ತೀಚೆಗಷ್ಟೇ ಮಧ್ಯಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ನಮಾಜ್ ಮಾಡುತ್ತಿರುವ ವಿಡಿಯೋವೊಂದು ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊ, ಕೇಂದ್ರೀಯ ಸಂಸ್ಥೆಯಾದ ಡಾ ಹರಿಸಿಂಗ್ ಗೌರ್ ಸಾಗರ್ ವಿಶ್ವವಿದ್ಯಾಲಯದ ತರಗತಿಯೊಳಗೆ ವಿದ್ಯಾರ್ಥಿ ನಮಾಜ್ ಮಾಡುವುದನ್ನು ತೋರಿಸುತ್ತದೆ. ಹಿಂದೂ ಜಾಗರಣ ಮಂಚ್ ಸಂಘಟನೆ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಆಡಳಿತಕ್ಕೆ ದೂರು ನೀಡಿದ್ದು, ವಿಶ್ವವಿದ್ಯಾನಿಲಯವು ತನಿಖೆಗೆ ಆದೇಶಿಸಿರುವುದಾಗಿ ಹೇಳಿದೆ.

ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ವಜಾಗೊಳಿಸಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net