ಏಳು ವರ್ಷದ ಬಾಲಕನ ಮುಂದೆ ಬೆತ್ತಲಾದ ನಟಿಗೆ ನ್ಯಾಯಾಲಯದಿಂದ ಬಹುದೊಡ್ಡ ಆಘಾತ..!

Minor Boy
Published on

ಅಕ್ರಾ (ಘಾನಾ): ಬಾಲಕನ ಮುಂದೆ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಪೋಸ್​ ನೀಡಿದ ಘಾನಾ ಮೂಲದ ನಟಿಯನ್ನು ಬಂಧಿಸಲಾಗಿದ್ದು, 90 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. "ಕೌಂಟುಂಬಿಕ ಹಿಂಸೆ" ಮತ್ತು "ಅಕ್ಷೇಪಾರ್ಹ ಅಂಶ"ವೆಂದು ನ್ಯಾಯಾಲಯ ಪರಿಗಣಿಸಿ ಶಿಕ್ಷೆ ವಿಧಿಸಿದೆ.

ಅಂದಹಾಗೆ ಸಂತ್ರಸ್ತ ಬಾಲಕ ಬೇರೆ ಯಾರು ಅಲ್ಲ, ನಟಿಯ ಸ್ವಂತ ಮಗನೇ. ಆತನ 7ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ರೀತಿಯ ಅಶ್ಲೀಲತೆಯನ್ನು ಪ್ರಚೋದಿಸಿ ಅನೇಕರ ಕೆಂಗಣ್ಣಿಗೆ ನಟಿ ಗುರಿಯಾಗಿದ್ದಾರೆ.

ನಟಿಯ ಹೆಸರು ರೋಸ್​ಮಂಡ್​ ಬ್ರೌನ್​. ಈಕೆ ಅಕುವಪೆಮ್​ ಪೊಲೋ ಎಂದೇ ಘಾನಾದಲ್ಲಿ ತುಂಬಾ ಪರಿಚತರಾಗಿದ್ದಾರೆ. ಈ ಘಟನೆ 2020ರ ಜೂನ್​ನಲ್ಲಿ ನಡೆದಿತ್ತು. ನಟಿ ರೋಸ್​ಮಂಡ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಿಕೊಂಡಿದ್ದರು. ಅಮೆರಿಕ ಪಾಪ್​ ಸ್ಟಾರ್​ ಕಾರ್ಡಿ ಬಿ ಸೇರಿದಂತೆ ಅನೇಕ ಗಣ್ಯರು ಇದನ್ನು ಕಟುವಾಗಿ ಖಂಡಿಸಿದ್ದರು.

ಇದಾದ ಬಳಿಕ ನಟಿಯ ವಿರುದ್ಧ ಪ್ರಕರಣ ದಾಖಲಾಗಿ, ಅಂದಿನಿಂದ ವಿಚಾರಣೆ ನಡೆಯುತ್ತಲೇ ಇತ್ತು. ಕೊನೆಗೂ ಘಾನಾ ರಾಜಧಾನಿ ಅಕ್ರಾದಲ್ಲಿರುವ ನ್ಯಾಯಾಲಯ ನಟಿ ವರ್ತನೆ "ಕೌಂಟುಂಬಿಕ ಹಿಂಸೆ" ಮತ್ತು "ಅಕ್ಷೇಪಾರ್ಹ ಅಂಶ"ವೆಂದು ಪರಿಗಣಿಸಿ 90 ದಿನಗಳು ಸಾಧಾರಣ ಶಿಕ್ಷೆಯನ್ನು ವಿಧಿಸಿದೆ.

ನ್ಯಾಯಮೂರ್ತಿ ಎಂ.ಎಸ್. ಕ್ರಿಸ್ಟಿಯಾನಾ ಕ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಣೆ ವೇಳೆ, ಘಾನಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅಶ್ಲೀಲ ವಸ್ತುಗಳನ್ನು ಪೋಸ್ಟ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net