

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ಶಿವಸೇನಾ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಾರ್ಟಿಗಳು ಸೇರಿಕೊಂಡು ರಚನೆ ಮಾಡಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಇದೀಗ ಬಿರುಕು ಮೂಡಿದ್ದು, ಸರ್ಕಾರ ಬೀಳುವ ಆತಂಕ ಎದುರಾಗಿದೆ.
ಅಷ್ಟಕ್ಕೂ ಮಹಾ ಸರ್ಕಾರದಲ್ಲಿ ನಡೆದಿರುವ ಬೆಳವಣಿಗೆ ಏನೆಂದರೆ, ಸಚಿವ ಹಾಗೂ ಶಿವಸೇನಾ ಪಕ್ಷದ ಪ್ರಮುಖ ನಾಯಕ ಏಕನಾಥ್ ಶಿಂಧೆ ಅವರು ತಮ್ಮ ಪಕ್ಷದ 10 ಶಾಸಕರ ಜತೆ ಗುಜರಾತಿನ ಹೋಟೆಲ್ಗೆ ಹೋಗಿ ಸೇರಿಕೊಂಡಿದ್ದಾರೆ. ಮಹಾ ಅಘಾಡಿ ಸರ್ಕಾರದಿಂದ ಅಮಸಾಧಾನಗೊಂಡಿರುವ ಶಿಂಧೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಒಂದು ಬೆಳವಣಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತವದ ಮಹಾ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಇಂದು ಮಧ್ಯಾಹ್ನದ ಹೊತ್ತಿಗೆ ಶಿಂಧೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ಸೂರತ್ ಹೋಟೆಲ್ನಲ್ಲಿ ಶಿವಸೇನೆಯ 12 ಶಾಸಕರ ಜೊತೆಗೆ ಐವರು ಸ್ವತಂತ್ರ ಶಾಸಕರು ಇದ್ದಾರೆ ಎಂದು ಪ್ರತಿಪಕ್ಷ ಬಿಜೆಪಿಯ ಮೂಲಗಳು ಹೇಳಿವೆ.
ಸದ್ಯ ಶಿಂಧೆ ಅವರೊಂದಿಗಿ ಇರುವ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದು, ಇದರಿಂದ ಶಿವಸೇನಾ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಆಡಳಿತ ಮೈತ್ರಿಗೆ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಶಿಂಧೆ ಅವರು ಥಾಣೆಯಲ್ಲಿ ಪ್ರಮುಖ ಶಿವಸೇನಾ ನಾಯಕರಾಗಿದ್ದಾರೆ ಮತ್ತು ಆ ಪ್ರದೇಶದಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶಿಂಧೆ ಓರ್ವ ಮಾಸ್ ಲೀಡರ್. ಬಿಜೆಪಿಯಿಂದಿಗಿನ ಮೈತ್ರಿಯನ್ನು ಮುರಿದುಕೊಂಡ ಬಳಿಕ 2014ರಲ್ಲೇ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶಿಂಧೆ ಹೆಸರು ಸೂಚಿಸಲಾಗಿತ್ತು. ಯಾವಾಗ ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾಯಿತೋ ಆಗ ಶಿಂಧೆ ಅವರನ್ನು ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವರಾಗಿ ನೇಮಕ ಮಾಡಲಾಯಿತು. ಇದಾದ ಬಳಿಕ ತನ್ನನ್ನು ತೆರೆ ಮರೆಗೆ ಸರಿಸುತ್ತಿದ್ದರೆ ಎಂಬ ಭಾವನೆ ಶಿಂಧೆ ಅವರಿಗೆ ಕಾಡತೊಡಗಿದ್ದು, ಇದರಿಂದ ಅಸಮಾಧಾನಗೊಂಡಿರುವ ಶಿಂಧೆ 10 ಶಾಸಕರೊಂದಿಗೆ ಸೂರತ್ಗೆ ಎಸ್ಕೇಪ್ ಆಗಿದ್ದಾರೆ. (ಏಜೆನ್ಸೀಸ್)