ತೌಕ್ತೆ ಅಬ್ಬರಕ್ಕೆ ಕಾರುಗಳ ಮೇಲೆ ಕುಸಿದುಬಿದ್ದ ಬಾಲ್ಕನಿ? ಭಯಾನಕ ವಿಡಿಯೋ ಹಿಂದಿನ ಸತ್ಯಾಂಶವೇ ಬೇರೆ!

Cars Damage
Published on

ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೊನಾ ನಡುವೆ ಎದ್ದಿರುವ ತೌಕ್ತೆ ಚಂಡಮಾರುತವು ಪಶ್ಚಿಮ ಕರಾವಳಿ ತೀರಪ್ರದೇಶದ ಉದ್ದಕ್ಕೂ ಭಾರೀ ಹಾನಿಯುಂಟು ಮಾಡಿದೆ. ಪಂಚ ರಾಜ್ಯಗಳಾದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್​ ತೌಕ್ತೆ ಹೊಡೆತದ ಪರಿಣಾಮವನ್ನು ಎದುರಿಸಿವೆ.

ಈ ಮಧ್ಯೆ ತೌಕ್ತೆ ಚಂಡಮಾರುತ ಸೃಷ್ಟಿಸಿರುವ ಅವಾಂತರಗಳ ಅನೇಕ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇವುಗಳ ನಡುವೆ ಮುಂಬೈನಲ್ಲಿರುವ ಕಟ್ಟಡದ ಒಂದು ಭಾಗ ಕುಸಿದು ಕೆಳಗೆ ಪಾರ್ಕ್​ ಮಾಡಿದ್ದ ಕಾರುಗಳು ಮೇಲೆ ಬಿದ್ದು, ಸಂಪೂರ್ಣ ನಾಶವಾಗಿದೆ ಎಂಬ ಅಡಿಬರಹದೊಂದಿಗೆ ವಿಡಿಯೋವೊಂದು ಸಹ ವೈರಲ್​ ಆಗಿದೆ. ಆದರೆ, ಈ ವಿಡಿಯೋ ತೌಕ್ತೆ ಚಂಡಮಾರುತಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.

ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ವಿಡಿಯೋ ಕುರಿತಾದ ಸತ್ಯಾಂಶ ತಿಳಿದುಬಂದಿದೆ. ಇದು ಮುಂಬೈನಲ್ಲಿ ನಡೆದಿರುವುದಲ್ಲ, ಬದಲಾಗಿ ಸೌದಿ ಅರೇಬಿಯಾದ ಮೆದಿನಾ ನಗರದಲ್ಲಿ ನಡೆದಿರುವ ಘಟನೆಯಾಗಿದೆ. ಅಪಾರ್ಟ್​ಮೆಂಟ್​ನ ಹೊರಭಾಗದಲ್ಲಿ ಪಾರ್ಕ್​ ಮಾಡಿದ್ದ ಕಾರುಗಳ ಮೇಲೆ ಬಾಲ್ಕನಿಯ ಒಂದು ಭಾಗ ಬಿದ್ದು ವಾಹನಗಳು ನುಜ್ಜುಗುಜ್ಜಾಗಿರುವ ವಿಡಿಯೋ ಇದಾಗಿದೆ. ಗುಡುಗು-ಸಿಡಿಲು ಸಹಿತ ಭಾರೀ ಮಳೆಯಿಂದಾಗಿ ಕಳೆದ ವರ್ಷ ಈ ದುರ್ಘಟನೆ ನಡೆದಿದೆ.

ವಿಡಿಯೋವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಅದರ ಮೇಲೆ ಸಿಸಿಟಿವಿ ಸಮಯವನ್ನು ಗುರುತಿಸಬಹುದು. ಇದರ ಪ್ರಕಾರ 30-07-2020ರಲ್ಲಿ ಘಟನೆ ರೆಕಾರ್ಡ್​ ಆಗಿದೆ. ಅಲ್ಲಿಗೆ ಈ ವಿಡಿಯೋಗೂ ಮತ್ತು ಪ್ರಸ್ತುತ ತೌಕ್ತೆ ಚಂಡಮಾರುತದ ಹಾನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇದೇ ವಿಡಿಯೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ನೋಡಿದಾಗ ಮಾರ್ಚ್​ 27ರಲ್ಲಿ ಫೇಸ್​ಬುಕ್​ ಖಾತೆಯೊಂದರಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ಭಾರೀ ಗಾಳಿಯಿಂದಾಗಿ ಅಲ್​ ಮುಘರಿಬ್​ ಸ್ಟ್ರೀಟ್​ನಲ್ಲಿನ ಬಾಲ್ಕನಿ ಕುಸಿದುಬಿದ್ದಿದೆ ಎಂದು ಅರೇಬಿಯಾ ಭಾಷೆಯಲ್ಲಿ ಅಡಿಬರಹವನ್ನು ನೀಡಲಾಗಿದೆ.

ಇದೇ ಆಧಾರದ ಮೇಲೆ ಕೀ ವರ್ಡ್ಸ್​ ಸಹಾಯದಿಂದ ಹುಡುಕಾಡಿದಾಗ ಕೆಲ ಅರೇಬಿಕ್​ ನ್ಯೂಸ್​ ಚಾನಲ್​ಗಳು ಈ ಸುದ್ದಿಯನ್ನು ಪ್ರಕಟಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಮೆದಿನಾದಲ್ಲಿ ನಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅರೇಬಿಕ್​ ಫ್ಯಾಕ್ಟ್​ಚೆಕ್​ ವೆಬ್​ಸೈಟ್​ ಸಹ ಈ ಘಟನೆ 2020ರ ಜುಲೈನಲ್ಲಿ ನಡೆದಿರುವುದಾಗಿ ಖಚಿತಪಡಿಸಿದೆ. ಅಲ್ಲಿಗೆ ಈ ವಿಡಿಯೋಗೂ ಮತ್ತು ತೌಕ್ತೆಗೂ ಸಂಬಂಧವಿಲ್ಲ ಎಂಬುದು ತಿಳಿಬಂದಿದೆ. ಇದನ್ನು ತಿಳಿಯದ ಅನೇಕರು ಜಾಲತಾಣದಲ್ಲಿ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net