

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಕೆಲವೇ ಕೆಲವು ವಿಡಿಯೋಗಳು ಮಾತ್ರ ಎಲ್ಲರ ಗಮನ ಸೆಳೆಯುತ್ತವೆ. ಆ ಸಾಲಿಗೆ ಶ್ವಾನಗಳ ಕ್ಯೂಟ್ ವಿಡಿಯೋಗಳು ಕೂಡ ಸೇರಿಕೊಳ್ಳುತ್ತವೆ. ಶ್ವಾನದ ತುಂಟಾಟ ಹಾಗೂ ತನ್ನ ಮಾಲೀಕನಿಗೆ ತೋರುವ ನಿಯತ್ತಿನ ವಿಡಿಯೋಗಳಂತೂ ಲೆಕ್ಕವಿಲ್ಲದಷ್ಟು ಜಾಲತಾಣದಲ್ಲಿ ಹರಿದಾಡಿವೆ. ಇದೀಗ ಶ್ವಾನಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದರೆ ಶ್ವಾನದ ಮೇಲಿನ ನಿಮ್ಮ ಪ್ರೀತಿ ಹೆಚ್ಚಾಗದೇ ಇರದು.
ಅರುಣಿಮಾ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಅರುಣಿಮಾ ಅವರ ತಾಯಿಯ ಬರ್ತಡೇ ಆಚರಣೆಯ ವಿಡಿಯೋ ಇದಾಗಿದೆ. ಆದರೆ, ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಕೇವಲ 19 ಸೆಕೆಂಡಿನ ವಿಡಿಯೋ ಇದಾಗಿದೆ.
ವಿಡಿಯೋದಲ್ಲಿ ಏನಿದೆ? ಅರುಣಿಮಾ ಅವರ ತಾಯಿಯು ಬರ್ತಡೇ ಕೇಕ್ ಕತ್ತರಿಸುವ ಮುನ್ನ ಮಾಮೂಲಿಯಂತೆ ಕ್ಯಾಂಡಲ್ ದೀಪವನ್ನು ಹಾರಿಸುತ್ತಾರೆ. ಈ ವೇಳೆ ಅಲ್ಲಿದ್ದ ಜನರೆಲ್ಲ ಚಪ್ಪಾಳೆ ತಟ್ಟಿ ಬರ್ತಡೇ ವಿಶ್ ಮಾಡುತ್ತಾರೆ. ಅದನ್ನು ಕುತೂಹಲದಿಂದ ನೋಡುತ್ತಿದ್ದ ಶ್ವಾನವೂ ಕೂಡ ತನ್ನ ಕಾಲುಗಳನ್ನು ಮೇಲೆತ್ತಿ ಚಪ್ಪಾಳೆ ತಟ್ಟಿ ಖುಷಿಯಿಂದ ಶುಭಕೋರುತ್ತದೆ.
ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದಿದೆ. ಈಗಾಗಲೇ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ವಿಡಿಯೋ ಗಿಟ್ಟಿಸಿಕೊಂಡಿದೆ. ಸಾಕಷ್ಟು ಮಂದಿ ನಾಯಿಯನ್ನು ಮೆಚ್ಚಿ, ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್)