

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸಿದ್ದಾರೆ. ಇಂದು ಒಂದು ದಿನ ವಿಚಾರಣೆಗೆ ಬಿಡುವು ನೀಡಲಾಗಿದ್ದು, ನಾಳೆ ಮತ್ತೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಬೇಕಿದೆ. ಇಡಿ, ರಾಹುಲ್ಗೆ ಸಮನ್ಸ್ ನೀಡಿ ವಿಚಾರಣೆ ಆರಂಭಿಸಿದಾಗಿನಿಂದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೆಹಲಿಯ ಇಡಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ದೆಹಲಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಇದರ ನಡುವೆ ನನ್ನ ಬಟ್ಟೆ ಹರಿದು, ಕ್ರೂರವಾಗಿ ಹಲ್ಲೆ ಮಾಡಿದರು ಎಂದು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಆರೋಪ ಮಾಡಿರುವ ವಿಡಿಯೋ ತುಣುಕನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಶಶಿ ತರೂರ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಯಾವುದೇ ಪ್ರಜಾಪ್ರಭುತ್ವದಲ್ಲಿ ಇದು ಅತಿರೇಕದ ಸಂಗತಿಯಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ಈ ರೀತಿಯಾಗಿ ನಿಭಾಯಿಸುವುದು ಪ್ರತಿ ಭಾರತೀಯ ಸಭ್ಯತೆಯ ಮಾನದಂಡವನ್ನು ಉಲ್ಲಂಘಿಸುತ್ತದೆ, ಅದರಲ್ಲೂ ಲೋಕಸಭೆಯ ಸಂಸದರಿಗೆ ಈ ರೀತಿ ಮಾಡುವುದು ಸರಿಯಲ್ಲ. ದೆಹಲಿ ಪೊಲೀಸರ ಈ ನಡೆಯನ್ನು ನಾನು ಖಂಡಿಸುತ್ತೇನೆ ಮತ್ತು ಈ ಘಟನೆಯ ಹೊಣೆ ಹೊರುವಂತೆ ಒತ್ತಾಯಿಸುತ್ತೇನೆ. ಸ್ಪೀಕರ್ ಓಂ ಬಿರ್ಲಾ ಅವರು ಕ್ರಮ ತೆಗೆದುಕೊಳ್ಳಬೇಕೆಂದು ತರೂರ್ ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ತಮಿಳುನಾಡಿನ ಕರೂರ್ ಕ್ಷೇತ್ರದ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ದೆಹಲಿ ಪೊಲೀಸರ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ನನ್ನ ಬಟ್ಟೆಯನ್ನು ಹರಿದು ಹಾಕಿದರು. ಇತರೆ ಪ್ರತಿಭಟನಾಕಾರರ ಜೊತೆಗೆ ಅಪರಾಧಿಯಂತೆ ಹೊತ್ತೊಯ್ದು ನನ್ನನ್ನು ಬಸ್ ಒಳಗೆ ತಳ್ಳಿದರು ಎನ್ನುತ್ತಾ ಬಟ್ಟೆ ಹರಿದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
ಬಸ್ಸಿನಲ್ಲಿ ನಾನು ಸೇರಿದಂತೆ 7-8 ಮಹಿಳೆಯರಿದ್ದೆವು. ನಾವು ಪದೇ ಪದೇ ನೀರು ಕೇಳುತ್ತಿದ್ದೆವು. ಆದರೆ ಅವರು ಕೊಡಲು ನಿರಾಕರಿಸಿದರು. ನಾವು ಅದನ್ನು ಹೊರಗಿನಿಂದ ಖರೀದಿಸಲು ಪ್ರಯತ್ನಿಸಿದಾಗ, ನೀರು ಕೊಡಬೇಡಿ ಎಂದು ಮಾರಾಟಗಾರರಿಗೆ ಹೇಳುತ್ತಿದ್ದರು ಎಂದು ಜ್ಯೋತಿಮಣಿ ಆರೋಪಿಸಿದರು. ಈ ವಿಷಯವನ್ನು ಪರಿಶೀಲಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಸದೆ ಒತ್ತಾಯಿಸಿರುವುದು ವಿಡಿಯೋದಲ್ಲಿದೆ.
ರಾಹುಲ್ ಗಾಂಧಿ ಅವರು ಸತತ ಮೂರು ದಿನ ವಿಚಾರಣೆಯನ್ನು ಮುಗಿಸಿದ್ದಾರೆ. ಇಂದು ಒಂದು ದಿನ ಬಿಡುವು ಸಿಕ್ಕಿದ್ದು, ನಾಳೆ ಮತ್ತೆ ವಿಚಾರಣೆ ಹಾಜರಾಗಬೇಕಿದೆ. ಇತ್ತ ಕಾಂಗ್ರೆಸ್ ಪ್ರತಿಭಟನೆಯು ಜೋರಾಗಿದೆ. ಇಂದು ಕಾಂಗ್ರೆಸ್ ದೇಶಾದ್ಯಂತ ರಾಜಭವನಕ್ಕೆ ಮುತ್ತಿಗೆ ಹಾಕಿದೆ. ಇಡಿ ವಿಚಾರಣೆ ಬಿಜೆಪಿಯ ದ್ವೇಷದ ರಾಜಕಾರಣ ಎಂದು ಆರೋಪಿಸಿದ್ದಾರೆ. ಇನ್ನು ಪ್ರತಿಭಟನಾ ಸಮಯದಲ್ಲಿ ಅನೇಕ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)