ಶಾಸಕನ ಕಾರಿನಲ್ಲಿ ಚಾಲಕನ ಮೃತದೇಹ ಪತ್ತೆ: ಸಾವಿಗೆ ಕಾರಣ ಕೇಳಿದ್ದಕ್ಕೆ ತಡಬಡಾಯಿಸಿದ ಎಂಎಲ್​ಸಿ!

MLA Car
Published on

ವಿಜಯವಾಡ: ಆತಂಕಕಾರಿ ಘಟನೆಯೊಂದರಲ್ಲಿ ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ಸಿಪಿಯ ಶಾಸಕ ಅನಂತ ಬಾಬು ಅಲಿಯಾಸ್​ ಅನಂತ ಉದಯ್​ ಭಾಸ್ಕರ್​ ಅವರ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಈ ಸುದ್ದಿ ಆಂಧ್ರದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಮೃತ ವ್ಯಕ್ತಿಯನ್ನು ಸುಬ್ರಮಣ್ಯಂ ಎಂದು ಗುರುತಿಸಲಾಗಿದೆ. ಈತ ಆಂಧ್ರದ ಕಾಕಿನಾಡ ಕ್ಷೇತ್ರ ಎಂಎಲ್​ಸಿ ಅನಂತ ಬಾಬು ಅವರ ಕಾರು ಚಾಲಕನಾಗಿದ್ದ. ಮಧ್ಯರಾತ್ರಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾನೆ ಎಂದು ಸುಬ್ರಮಣ್ಯಂ ಸಹೋದರನಿಗೆ ಶಾಸಕ ಅನಂತ ಬಾಬು ಮೊದಲು ತಿಳಿಸಿದ್ದರು. ಆದರೆ, ಮಾರನೇ ದಿನ ನಸುಕಿನ ಜಾವ ತಾವೇ ಸುಬ್ರಮಣ್ಯಂ ಮೃತದೇಹವನ್ನು ಅವರ ನಿವಾಸಕ್ಕೆ ಕಾರಿನಲ್ಲಿ ತೆಗೆದುಕೊಂಡು ಬಂದ ಅನಂತ ಬಾಬು ಕಾರನ್ನು ಅಲ್ಲಿಯೇ ಬಿಟ್ಟು ಬೇರೊಂದು ಕಾರಿನಲ್ಲಿ ಮರಳಿದರು.

ಮೃತದೇಹವನ್ನು ಮನೆಗೆ ತಂದಾಗ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಸುಬ್ರಮಣ್ಯಂ ಕುಟುಂಬಸ್ಥರು ಶಾಸಕ ಅನಂತ ಬಾಬುರನ್ನು ಪ್ರಶ್ನಿಸಿದರು. ಆದರೆ, ಏನನ್ನೂ ಹೆಚ್ಚಿಗೆ ಹೇಳದೆ ಮೃತದೇಹ ಹಸ್ತಾಂತರಿಸಿ ಹಿಂದಿರುಗಿದರು. ಇದೀಗ ಕುಟುಂಬಕ್ಕೆ ಅನುಮಾನ ಬಂದಿದ್ದು, ಸುಬ್ರಮಣ್ಯಂ ಕೊಲೆಯಾಗಿರಬಹುದಾ ಎಂದು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಮೃತರ ಪೋಷಕರ ಪ್ರಕಾರ, ಸುಬ್ರಮಣ್ಯಂ ಕಳೆದ ಐದು ವರ್ಷಗಳಿಂದ ಎಂಎಲ್ಸಿ ಅನಂತ ಉದಯ ಭಾಸ್ಕರ್ ಅವರ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ವೈಎಸ್‌ಆರ್‌ಸಿಪಿ ಮುಖಂಡರೇ ತಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಅನಂತಬಾಬು ತಮ್ಮ ಹುಟ್ಟುಹಬ್ಬವನ್ನು ಪಕ್ಷದ ಇತರ ಸದಸ್ಯರೊಂದಿಗೆ ಆಚರಿಸಿಕೊಂಡರು. ಆ ಪಾರ್ಟಿಯಲ್ಲಿ ಏನಾದರೂ ನಡೆದಿದೆಯೇ? ಅಥವಾ ಚಾಲಕ ಸುಬ್ರಮಣ್ಯಂ ಸಾವಿಗೆ ಬೇರೆ ಕಾರಣವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net