ಯೂಕ್ರೇನ್​ನಲ್ಲಿ ಸಿಲುಕಿರುವ ಪುತ್ರಿ: ಅನಿರೀಕ್ಷಿತ ಫೋನ್​ ಕಾಲ್​ ಸ್ವೀಕರಿಸಿದ ಮಹಿಳೆಗೆ ಖುಷಿಯ ಬೆನ್ನಲ್ಲೇ ಬಿಗ್​ ಶಾಕ್!​

Cyber Crime
Published on

ಭೋಪಾಲ್​: ರಷ್ಯಾ ದಾಳಿಗೆ ಒಳಗಾಗಿರುವ ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪಾಲಕರು ಪರದಾಡುತ್ತಿರುವ ಸಮಯದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದುರುಳರು ಹಣ ವಂಚನೆಯ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.

ಯೂಕ್ರೇನ್​ನಲ್ಲಿ ರಷ್ಯಾ ರಕ್ತ ಚರಿತ್ರೆ ಸೃಷ್ಟಿಸುತ್ತಿದೆ. ಇಡೀ ಯೂಕ್ರೇನ್​ ರಷ್ಯಾ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಎತ್ತ ನೋಡಿದರೂ, ಕೇಳಿದರು ಮದ್ದು-ಗುಂಡಗಳ ಭೀಕರ ಶಬ್ದ, ಜನರ ಆರ್ತನಾದ ಕೇಳುತ್ತಿದೆ. ಯಾವಾಗ? ಏನಾಗುತ್ತದೋ? ಎಂಬ ಭಯದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿದೆ. ಮಕ್ಕಳಿಗೆ ಏನಾಗುತ್ತದೋ ಎಂಬ ಭಯದಲ್ಲಿ ಪಾಲಕರಿದ್ದರೆ, ದುಷ್ಟರು ಯೂಕ್ರೇನ್​ನಲ್ಲಿ ಸಿಲುಕಿರುವ ಮಕ್ಕಳನ್ನು ಕರೆತರುತ್ತೇವೆ ಎಂದು ನಂಬಿಸಿ ವಂಚಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

ಭೋಪಾಲ್​ ಮೂಲದ ವೈಶಾಲಿ ವಿಲ್ಸನ್​ ಎಂಬುವವರೇ ಮೋಸ ಹೋದ ಮಹಿಳೆ. ಅವರ ಮಗಳು ಸೃಷ್ಟಿ ಯೂಕ್ರೇನ್​ನಲ್ಲಿ ಎಂಬಿಬಿಎಸ್​ ಓದುತ್ತಿದ್ದಾಳೆ. ಆಕೆಯನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರ ತಿಳಿದ ವ್ಯಕ್ತಿಯೊಬ್ಬ ವೈಶಾಲಿ ಅವರಿಗೆ ಫೆ. 25ರಂದು ಕರೆ ಮಾಡಿದ್ದಾನೆ. ಬಳಿಕ ನಾನು ಪ್ರಧಾನ ಮಂತ್ರ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ನಿಮ್ಮ ಮಗಳನ್ನು ಯೂಕ್ರೇನ್​ನಿಂದ ಕರೆತರಲು ವಿಮಾನದ ಟಿಕೆಟ್​ ಬುಕ್ಕಿಂಗ್​ಗಾಗಿ 42 ಸಾವಿರ ರೂಪಾಯಿ ಡೆಪಾಸಿಟ್​ ಮಾಡಿ ಎಂದು ಕೇಳಿದ್ದಾನೆ.

ಮೊದಲೇ ಮಗಳ ಚಿಂತೆಯಲ್ಲಿದ್ದ ವೈಶಾಲಿ, ಹಣಕ್ಕಿಂತ ಮಗಳು ಸುರಕ್ಷಿತವಾಗಿ ಮನೆಗೆ ಮರಳಿದರೆ ಸಾಕು ಅಂದುಕೊಂಡು ಹಿಂದೆ-ಮುಂದೆ ಯೋಚಿಸದೇ ಕೇಳಿದಷ್ಟು ಹಣವನ್ನು ಕರೆ ಮಾಡಿದ ವ್ಯಕ್ತಿ ಕೊಟ್ಟ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆಯಾದ ಬೆನ್ನಲ್ಲೇ ಆ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬರದಿರಲಿಲ್ಲ. ಇತ್ತ ಫೋನ್​ ಮಾಡಿದರೂ ಸ್ವಿಚ್​ ಆಫ್​ ಬರುತ್ತಿತ್ತು. ಇದಾದ ಬಳಿಕ ತಾವು ಮೋಸ ಹೋಗಿರುವುದಾಗಿ ಗೊತ್ತಾಗಿದೆ. ತಕ್ಷಣ ವಿದಿಶಾ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಆರೋಪಿ ಯಾರೆಂಬುದು ಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ವೈಶಾಲಿ ಮಗಳು ಸೃಷ್ಟಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಎಂದು ವಿದಿಶಾ ಪೊಲೀಸ್​ ವರಿಷ್ಠಾಧಿಕಾರಿ ವಿವರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net